AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣಜಿ ಟ್ರೋಫಿ ಸೆಮಿಫೈನಲ್​; ನಾಯಕನಾಗಿ 2ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್

ರಣಜಿ ಟ್ರೋಫಿ ಸೆಮಿಫೈನಲ್​; ನಾಯಕನಾಗಿ 2ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್

ಪೃಥ್ವಿಶಂಕರ
|

Updated on: Feb 15, 2026 | 5:00 PM

Share

Devdutt Padikkal's 9th First-Class Century: ಲಕ್ನೋದಲ್ಲಿ ನಡೆದ 2025-26 ರ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ತಂಡ ಕೆಎಲ್ ರಾಹುಲ್ (141) ಮತ್ತು ನಾಯಕ ದೇವದತ್ ಪಡಿಕ್ಕಲ್ (ಶತಕ) ಅವರ ಅಮೋಘ ಬ್ಯಾಟಿಂಗ್‌ನಿಂದ ಮೊದಲ ದಿನ ಪ್ರಬಲ ಪ್ರದರ್ಶನ ನೀಡಿದೆ. ಪಡಿಕ್ಕಲ್ ಅವರ ಸೀಸನ್‌ನ ಎರಡನೇ ಶತಕದೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3,500 ರನ್‌ಗಳ ಗಡಿ ದಾಟಿದರು. ಇಬ್ಬರ ಬೃಹತ್ ಜೊತೆಯಾಟ ತಂಡವನ್ನು ಮುನ್ನಡೆಸಿತು.

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಮೊದಲ ದಿನದಂದು ಅಮೋಘ ಪ್ರದರ್ಶನ ನೀಡಿದೆ. ಅನುಭವಿ ಆರಂಭಿಕ ಕೆಎಲ್ ರಾಹುಲ್ 141 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ತಂಡದ ನಾಯಕ ದೇವದತ್ ಪಡಿಕ್ಕಲ್ ಅದ್ಭುತ ಶತಕ ಬಾರಿಸಿ ತಂಡವನ್ನು ಮುನ್ನಡೆಸಿದರು. ಇದು ಈ ಅವೃತ್ತಿಯ ರಣಜಿ ಟ್ರೋಫಿಯಲ್ಲಿ ಪಡಿಕ್ಕಲ್ ಅವರ ಎರಡನೇ ಶತಕವಾಗಿದ್ದು, ಒಟ್ಟಾರೆಯಾಗಿ, ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಅವರ ಒಂಬತ್ತನೇ ಶತಕವಾಗಿವಾಗಿದೆ. ಈ ಶತಕದಿಂದಾಗಿ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 3,500 ರನ್‌ಗಳ ಗಡಿ ಕೂಡ ದಾಟಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಮಯಾಂಕ್ ಅಗರ್ವಾಲ್ 5 ರನ್‌ಗಳಿಸಿ ಔಟಾದರು. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್, ಶತಕ ವೀರ ಕೆಎಲ್ ರಾಹುಲ್ (141) ಅವರೊಂದಿಗೆ 278 ರನ್‌ಗಳ ಬೃಹತ್ ಪಾಲುದಾರಿಕೆಯನ್ನು ರೂಪಿಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಮೊದಲ ದಿನದಾಟದ ಎರಡನೇ ಸೆಷನ್​ನಲ್ಲಿ ಈ ಇಬ್ಬರು ಆಟಗಾರರು ತಮ್ಮ ತಮ್ಮ ಶತಕ ಪೂರೈಸಿದರು.

ಈ ಪಂದ್ಯದಲ್ಲಿ 116 ನೇ ರನ್‌ ಕಲೆಹಾಕಿದ ಕೂಡಲೇ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 3,500 ರನ್‌ಗಳ ಗಡಿ ದಾಟಿದ್ದಾರೆ. 53 ಪಂದ್ಯಗಳಲ್ಲಿ 41 ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಕಲೆಹಾಕಿರುವ ಪಡಿಕ್ಕಲ್, ಈ ಮಾದರಿಯಲ್ಲಿ 19 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಪ್ರಸ್ತುತ ರಣಜಿ ಆವೃತ್ತಿಯಲ್ಲಿ ಪಡಿಕ್ಕಲ್, ತಮ್ಮ ಮೊದಲ ಶತಕವನ್ನು ಪಂಜಾಬ್ ವಿರುದ್ಧ ಬಾರಿಸಿದ್ದರು. ಈ ಪಂದ್ಯದಲ್ಲಿ ಪಡಿಕ್ಕಲ್ ಕೇವಲ 85 ಎಸೆತಗಳಲ್ಲಿ ಅಜೇಯ 120 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಈ ಆವೃತ್ತಿಯಲ್ಲಿ ಒಂಬತ್ತು ಇನ್ನಿಂಗ್ಸ್‌ಗಳನ್ನಾಡಿರುವ ಪಡಿಕ್ಕಲ್ 420 ಕ್ಕೂ ಹೆಚ್ಚು ರನ್‌ ಕೆಲಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕದ ಜೊತೆಗೆ ಎರಡು ಶತಕಗಳು ಸೇರಿವೆ.