AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಪ್ರಕರಣ: ಎನ್​ಐಎ ತನಿಖೆಗೆ ವಹಿಸುವ ಬಗ್ಗೆ ಅಮಿತ್ ಶಾ ಭೇಟಿ ಮಾಡಲಿರುವ ಹೆಚ್​ಡಿ ಕುಮಾರಸ್ವಾಮಿ

ಧರ್ಮಸ್ಥಳ ಪ್ರಕರಣ: ಎನ್​ಐಎ ತನಿಖೆಗೆ ವಹಿಸುವ ಬಗ್ಗೆ ಅಮಿತ್ ಶಾ ಭೇಟಿ ಮಾಡಲಿರುವ ಹೆಚ್​ಡಿ ಕುಮಾರಸ್ವಾಮಿ

Ganapathi Sharma
|

Updated on: Sep 03, 2025 | 2:10 PM

Share

ಧರ್ಮಸ್ಥಳ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ತನಿಖೆಯ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಒದಗಿಸಬೇಕಿದ್ದು, ಎನ್​ಐಎ ತನಿಖೆಗೆ ವಹಿಸಬೇಕು ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈಮಧ್ಯೆ, ಸಚಿವ ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು, ಸೆಪ್ಟೆಂಬರ್ 3: ಧರ್ಮಸ್ಥಳ ಪ್ರಕರಣ ಸಂಬಂಧ ಹೊರರಾಜ್ಯ ಮತ್ತು ವಿದೇಶಗಳಿಂದ ಹಣಕಾಸು ನೆರವು ಹರಿದು ಬಂದಿರುವ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಾಥಮಿಕ ತನಿಖೆ ಆರಂಭಿಸಿದೆ. ಈ ಮಧ್ಯೆ, ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ತನಿಖೆಯ ಹೊಣೆ ವಹಿಸುವಂತೆ ಮನವಿ ಮಾಡಲು ಸಚಿವ ಹೆಚ್‍ಡಿ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಗೃಹ ಸಚಿವರಿಗೆ ಮನವಿ ಮಾಡುವುದಕ್ಕಾಗಿ ಕೆಲವೊಂದು ದಾಖಲೆಗಳನ್ನು ಕಲೆ ಹಾಕುವುದರ ಜೊತೆಗೆ ಸಿದ್ಧತೆಯನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ‘ಟಿವಿ9’ಗೆ ತಿಳಿಸಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಹೋರಾಟಕ್ಕೇ ಹೊರ ರಾಜ್ಯ, ದೇಶಗಳಿಂದ ಹಣಕಾಸು ನೆರವು ಬರುತ್ತಿರಬಹುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಎನ್ಐಎ ತನಿಖೆಯಾಗಲಿ. ಸತ್ಯ ಹೊರಬರಲಿ ಎಂದಿದ್ದಾರೆ.

ಧರ್ಮಸ್ಥಳ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಸುವ ಸಾಮರ್ಥ್ಯ ಎನ್ಐಎಗೆ ಇರುವುದರಿಂದ, ಸತ್ಯ ಹೊರತರಲು ತನಿಖೆಯ ಹೊಣೆಯನ್ನು ಎನ್​ಐಎಗೆ ವಹಿಸುವುದು ಸೂಕ್ತ ಮಾರ್ಗ ಎಂದು ಅವರು ಹೇಳಿದ್ದಾರೆ. ಅವರು ತಮ್ಮ ಪಕ್ಷದಿಂದ ಕೇಂದ್ರ ಸರ್ಕಾರ ಮತ್ತು ಸಂಬಂಧಿತ ಸಚಿವರ ಮೇಲೆ ಒತ್ತಡ ಹೇರಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.

ಧರ್ಮಸ್ಥಳವು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದ್ದು, ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಪ್ರಕರಣದಿಂದ ಧರ್ಮಸ್ಥಳದ ಖ್ಯಾತಿಗೆ ಧಕ್ಕೆಯಾಗುತ್ತಿದೆ. ಹೀಗಾಗಿ, ಪಾರದರ್ಶಕ ಮತ್ತು ಪರಿಣಾಮಕಾರಿ ತನಿಖೆ ಅಗತ್ಯವಾಗಿದ್ದು, ಅದಕ್ಕಾಗಿ ಎನ್ಐಎ ತನಿಖೆ ಅನಿವಾರ್ಯ. ಕುಮಾರಸ್ವಾಮಿ ಅವರು ಈಗಾಗಲೇ ಸಂಬಂಧಪಟ್ಟ ದಾಖಲೆಗಳನ್ನು ಒಟ್ಟುಗೂಡಿಸುತ್ತಿದ್ದಾರೆ. ಅವರು ಕೇಂದ್ರದ ಮೇಲೆ ಎನ್​ಐಎ ತನಿಖೆಗೆ ಒತ್ತಡ ಹೇರಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಒತ್ತಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಸತ್ಯ ಹೊರಬರಬೇಕು ಮತ್ತು ದೋಷಿಗಳು ಶಿಕ್ಷೆಯನ್ನು ಅನುಭವಿಸಬೇಕು ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ