ಧರ್ಮಸ್ಥಳ ಪ್ರಕರಣಕ್ಕೆ ರೋಚಕ ತಿರುವು: ಬಂಗ್ಲೆಗುಡ್ಡದಲ್ಲಿ 5 ಬುರುಡೆ, ಮೂಳೆಗಳು, ಎರಡು ಹಗ್ಗ, ಸೀರೆ ಪತ್ತೆ!

Updated By: Ganapathi Sharma

Updated on: Sep 18, 2025 | 9:04 AM

ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮಾಸ್ಕ್‌ಮ್ಯಾನ್ ಚಿನ್ನಯ್ಯ ನೀಡಿದದ್ದ ಮಾಹಿತಿಯಂತೆ ಉತ್ಖನನ ನಡೆಸಿದ್ದಾಗ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರಲಿಲ್ಲ. ಆದರೆ, ಈಗ ಸೌಜನ್ಯಳ ಮಾವ ವಿಠ್ಠಲಗೌಡ ಸೂಚಿಸಿದ ಸ್ಥಳದಲ್ಲಿ ಎಸ್‌ಐಟಿ ತಂಡವು ತಲೆಬುರುಡೆ ಮತ್ತು ಮೂಳೆಗಳನ್ನು ಪತ್ತೆಹಚ್ಚಿದೆ. ಇದು ತನಿಖೆಯ ದಿಕ್ಕನ್ನೇ ಬದಲಾಯಿಸಿದೆ.

ಮಂಗಳೂರು, ಸೆಪ್ಟೆಂಬರ್ 18: ಧರ್ಮಸ್ಥಳ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ದೊರೆತಿದೆ. ಬಂಗ್ಲೆಗುಡ್ಡದಲ್ಲಿ ಅನೇಕ ಅಸ್ಥಿಪಂಜರಗಳನ್ನು ನೋಡಿದ್ದೇನೆ ಎಂದು ವಿಠಲ್ ಗೌಡ ಮಾಡಿದ್ದ ಆರೋಪ ಸಂಬಂಧ ಎಸ್ಐಟಿ ಶೋಧ ತೀವ್ರಗೊಂಡಿದ್ದು, ಹಲವು ವಸ್ತುಗಳು ಪತ್ತೆಯಾಗಿವೆ. ಶೋಧದ ವೇಳೆ ಒಂದು ಅಸ್ಥಿಪಂಜರದ ಪಕ್ಕದಲ್ಲೇ ಹಿರಿಯ ನಾಗರಿಕರ ಕಾರ್ಡ್ ಪತ್ತೆಯಾಗಿದೆ. ಅಲ್ಲದೆ, ಮರದಲ್ಲಿ ಎರಡು ಹಗ್ಗ ಮತ್ತು ಒಂದು ಸೀರೆ ಸಿಕ್ಕಿದ್ದು, ನೇಣುಬಿಗಿದ ಅನುಮಾನ ಮೂಡಿಸಿದೆ. ಮಹಜರು ಸಂದರ್ಭದಲ್ಲಿ ಪತ್ತೆಯಾದ ವಸ್ತುಗಳನ್ನು ಎಸ್ಐಟಿ ಅಧಿಕಾರಿಗಳು ಸೀಲ್ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. SOCO ಮತ್ತು ಎಫ್‌ಎಸ್‌ಎಲ್ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರ ಹಾಗೂ ಪತ್ತೆಯಾದ ವಸ್ತುಗಳನ್ನು ಸಂಗ್ರಹಿಸಿವೆ.

ಬಂಗ್ಲೆಗುಡ್ಡದಲ್ಲಿ ಬುಧವಾರ ಒಟ್ಟು ಐದು ಬುರುಡೆಗಳು ಮತ್ತು ಮೂಳೆಗಳು ಪತ್ತೆಯಾಗಿದ್ದು, ಎಸ್ಐಟಿ ಪಂಚರ ಸಮ್ಮುಖದಲ್ಲಿ ಮಹಜರು ಪೂರ್ಣಗೊಳಿಸಲಾಗಿತ್ತು. ಭೂಮಿಯ ಮೇಲ್ಭಾಗದಲ್ಲೇ ಅಸ್ಥಿಪಂಜರ ಪತ್ತೆಯಾದ್ದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸೀಲ್ ಮಾಡಲಾದ ಅಸ್ಥಿಪಂಜರ ಮತ್ತು ವಸ್ತುಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲು ಎಸ್ಐಟಿ ತಯಾರಿ ನಡೆಸುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ