ಮಗುವಿಗೆ ಜನ್ಮ ನೀಡಿದ 70ರ ಅಜ್ಜಿ? ಇದರ ಹಿಂದಿನ ಸತ್ಯ ಬೇರೆಯೇ ಇದೆ
ಧಾರವಾಡದಲ್ಲಿ 70 ವರ್ಷದ ವೃದ್ಧೆಯ ಮಗುವಿನ ಜನನದ ಬಗ್ಗೆ ವೈರಲ್ ವಿಡಿಯೋ ಹುಬ್ಬಳ್ಳಿ-ಧಾರವಾಡ ಜನರನ್ನು ಕ್ಷಣಕಾಲ ದಂಗು ಬಡಿಸಿತ್ತು. ಆದರೆ, ಇದು ಸತ್ಯವಲ್ಲ. ಕಲಘಟಗಿಯ ಪಕ್ಕೀರಮ್ಮ ಎಂಬ ವೃದ್ಧೆ, ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್, ವೀವ್ಸ್ ಗಳಿಸಲು ಆಸ್ಪತ್ರೆಯಲ್ಲಿ ಬೇರೊಬ್ಬರ ಮಗುವಿನೊಂದಿಗೆ ನಟಿಸಿ ಮಾಡಿದ ಫೇಕ್ ರೀಲ್ಸ್ ಎಂಬ ಸತ್ಯ ಈಗ ಬಯಲಾಗಿದೆ. ಜನರ ಹುಚ್ಚಾಟಕ್ಕೆ ಇದೊಂದು ಉದಾಹರಣೆ.
ಧಾರವಾಡ, ನ.4: ಸುಮಾರು 70 ವರ್ಷದ ವಯೋವೃದ್ಧೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುವ ಮೂಲಕ ಹುಬ್ಬಳ್ಳಿ-ಧಾರವಾಡ ಜನತೆಯನ್ನು ಕ್ಷಣಕಾಲ ದಂಗಾಗಿಸಿತ್ತು. “ನನಗೆ ದೇವರು ಮಗುವನ್ನು ಕೊಟ್ಟಿದ್ದಾನೆ” ಎಂದು ಅಜ್ಜಿ ಹೇಳುವ ಮಾತುಗಳನ್ನು ಕೇಳಿ ಲಕ್ಷಾಂತರ ಜನರು ಆಶ್ಚರ್ಯಚಕಿತರಾಗಿದ್ದರು. ಆದರೆ, ಈ ವಿಡಿಯೋದ ಸಂಪೂರ್ಣ ತನಿಖೆ ನಡೆಸಿದಾಗ ಇದು ಯಾವುದೇ ಪವಾಡ ಅಥವಾ ಸತ್ಯ ಘಟನೆಯಲ್ಲ, ಬದಲಿಗೆ ಲೈಕ್ಸ್ ಮತ್ತು ವ್ಯೂಸ್‌ಗಾಗಿ ಮಾಡಿದ ‘ಫೇಕ್ ರೀಲ್ಸ್’ ಎಂಬ ಸ್ಫೋಟಕ ಸತ್ಯ ಬಯಲಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೋಗೆನಾಗರಕೊಪ್ಪ ಗ್ರಾಮದ ಪಕ್ಕೀರಮ್ಮ ಎಂಬ ವೃದ್ಧೆಯೇ ಈ ವೈರಲ್ ವಿಡಿಯೋದ ಪ್ರಮುಖ ರೂವಾರಿ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಲಗಿದ್ದ ಅಜ್ಜಿ, ತನ್ನ ಪಕ್ಕದಲ್ಲಿ ನವಜಾತ ಮಗುವೊಂದನ್ನು ಮಲಗಿಸಿಕೊಂಡು ಈ ವಿಡಿಯೋ ಮಾಡಿದ್ದಾರೆ. “ನಾನೇ ಈ ಮಗುವಿಗೆ ಜನ್ಮ ನೀಡಿದ್ದೇನೆ, ಇದನ್ನು ನನಗೆ ಆ ದೇವರೇ ಕರುಣಿಸಿದ್ದಾನೆ” ಎಂದು ಅಜ್ಜಿ ಅಭಿನಯಿಸಿ ರೀಲ್ಸ್ ಶೂಟ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ವೈದ್ಯಕೀಯ ಲೋಕವೇ ಅಚ್ಚರಿಪಡುವಂತಹ ಘಟನೆ ನಡೆದಿದೆಯೇ ಎಂದು ಜನರು ಬೆರಗಾಗಿದ್ದರು. ಅನೇಕರು ಈ ವಯಸ್ಸಿನಲ್ಲಿ ಮಗು ಹೇಗಾಯಿತು ಎಂದು ಚರ್ಚಿಸಲು ಶುರು ಮಾಡಿದ್ದರು. ಆದರೆ, ಸ್ಥಳೀಯರು ಹಾಗೂ ಆಸ್ಪತ್ರೆ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ಅದು ಬೇರೊಬ್ಬರ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ಮಾಡಿದ ಬರೀ ‘ರೀಲ್ಸ್ ಗಿಮಿಕ್’ ಎಂಬುದು ಸ್ಪಷ್ಟವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಜನ ಎಷ್ಟರಮಟ್ಟಿಗೆ ಹುಚ್ಚಾಟ ಆಡುತ್ತಾರೆ ನೋಡಿ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ