ಡಿಕೆ ಶಿವಕುಮಾರ್ ಸಿಎಂ ಆಗಲೆಂದು 3 ವರ್ಷದಿಂದ ಗಡ್ಡ-ಕೂದಲು ಬಿಟ್ಟು ಹರಕೆ ಹೊತ್ತಿದ್ದ ಅಪ್ಪಟ ಅಭಿಮಾನಿ!
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಕಳೆದ 3 ವರ್ಷಗಳಿಂದ ಕಟ್ಟಿಂಗ್ ಹಾಗೂ ಶೇವಿಂಗ್ ಮಾಡಿಸದೆ ಹರಕೆ ಹೊತ್ತಿದ್ದ ಹಾರೋಹಳ್ಳಿಯ ಈಶ್ವರಪ್ಪ ಎಂಬ ಅಭಿಮಾನಿಯ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ಡಿಕೆಶಿ ಪ್ರಮಾಣವಚನ ಮುಗಿದ ಬೆನ್ನಲ್ಲೇ ಮಂತ್ರಾಲಯಕ್ಕೆ ತೆರಳಿ ಮುಡಿ ಕೊಡಲು ಸಜ್ಜಾಗಿದ್ದಾರೆ. ಇವರು ಡಿಕೆಶಿ ಸಿಎಂ ಆಗಲೆಂದು ಕುಮಭಮೇಳದಲ್ಲೂ ಪ್ರಾರ್ಥನೆ ಮಾಡಿದ್ದರು.
ರಾಮನಗರ, ಮೇ 30: ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ‘ಕನಕಪುರ ಬಂಡೆ’ ಖ್ಯಾತಿಯ ಡಿಕೆ ಶಿವಕುಮಾರ್ ಆಯ್ಕೆ ಹಾಗೂ ಪದಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಅವರ ಅಪ್ಪಟ ಅಭಿಮಾನಿಯೊಬ್ಬರ ಅಪರೂಪದ ಹರಕೆಯ ಕಥೆ ಬೆಳಕಿಗೆ ಬಂದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿ ಗ್ರಾಮದ ಈಶ್ವರಪ್ಪ ಎಂಬ ಅಭಿಮಾನಿ, ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿ ಗಾದಿ ಏರಲಿ ಎಂದು ಕಳೆದ ಮೂರು ವರ್ಷಗಳಿಂದ ವಿಶಿಷ್ಟ ಹರಕೆಯೊಂದನ್ನು ಹೊತ್ತಿದ್ದರು.
ಆಸ್ತಿ, ಅಂತಸ್ತಿಗಿಂತಲೂ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯನ್ನೇ ತನ್ನ ಧ್ಯೇಯವಾಗಿಸಿಕೊಂಡಿದ್ದ ಈಶ್ವರಪ್ಪ, ‘ಡಿಕೆಶಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೂ ನಾನು ತಲೆಗೂದಲು ಹಾಗೂ ಗಡ್ಡವನ್ನು ಕತ್ತರಿಸುವುದಿಲ್ಲ (ಕ್ಷೌರ ಮಾಡಿಸುವುದಿಲ್ಲ)’ ಎಂದು ಪ್ರತಿಜ್ಞೆ ಮಾಡಿದ್ದರು. ಅಷ್ಟೇ ಅಲ್ಲದೆ, ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ (ಅಲಹಾಬಾದ್) ತೆರಳಿದ್ದ ಈಶ್ವರಪ್ಪ, ಪವಿತ್ರ ಕುಂಭಮೇಳದ ಸಂದರ್ಭದಲ್ಲಿ ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಡಿಕೆ ಶಿವಕುಮಾರ್ ಅವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು, ಅವರು ಶೀಘ್ರದಲ್ಲೇ ಕರುನಾಡಿನ ಸಿಎಂ ಆಗಲಿ ಎಂದು ವಿಶೇಷ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಿ ಗಮನ ಸೆಳೆದಿದ್ದರು.
ಕಳೆದ ಮೂರು ವರ್ಷಗಳಿಂದ ಗಡ್ಡ ಮತ್ತು ದಟ್ಟವಾದ ತಲೆಗೂದಲು ಬಿಟ್ಟು ತಪಸ್ವಿಯಂತೆ ತಿರುಗುತ್ತಿದ್ದ ಈಶ್ವರಪ್ಪ ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಹಾಗೂ ಕಾಲಭೈರವೇಶ್ವರ ಅನುಗ್ರಹ ನೀಡಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಡಿಕೆಶಿ ಹೆಸರು ಸಿಎಂ ಹುದ್ದೆಗೆ ಫೈನಲ್ ಆಗುತ್ತಿದ್ದಂತೆಯೇ ಈಶ್ವರಪ್ಪ ಅವರ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಬೆಂಗಳೂರಿಗೆ ಬಂದು ಅವರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಲು ಈಶ್ವರಪ್ಪ ನಿರ್ಧರಿಸಿದ್ದಾರೆ. ಅದಾದ ಬಳಿಕ ನೇರವಾಗಿ ಮಂತ್ರಾಲಯ ಪುಣ್ಯಕ್ಷೇತ್ರಕ್ಕೆ ತೆರಳಿ ಶ್ರೀ ಗುರು ರಾಯರ ಸನ್ನಿಧಿಯಲ್ಲಿ ತಮ್ಮ ತಲೆಗೂದಲು ಹಾಗೂ ಗಡ್ಡವನ್ನು ಒಪ್ಪಿಸಿ (ಮುಡಿ ಕೊಟ್ಟು) ಹರಕೆ ತೀರಿಸುವುದಾಗಿ ಭಾವುಕರಾಗಿ ತಿಳಿಸಿದ್ದಾರೆ. ನಾಯಕನ ಮೇಲಿನ ಈ ಅಪ್ರತಿಮ ಅಭಿಮಾನದ ವಿಡಿಯೋ ಈಗ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
