ದಾವಣಗೆರೆ: ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಣೆ

| Updated By: ವಿವೇಕ ಬಿರಾದಾರ

Updated on: Oct 13, 2024 | 10:16 AM

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾರಥಿ ಕ್ಯಾಂಪ್​ನಲ್ಲಿ 50ಕ್ಕೂ ಹೆಚ್ಚು ಗೌಳಿ ಕುಟುಂಬಗಳಿಂದ ವಿಭಿನ್ನವಾಗಿ ದಸರಾ ಆಚರಿಸಲಾಯಿತು. ಗೌಳಿ ಸಮುದಾಯದವರು ದಸರಾ ಅನ್ನು ಶಿಲ್ಲೇಂಗಾನ್ ಎಂದು ಕರೆಯುತ್ತಾರೆ. ಗೌಳಿ ಸಮುದಾಯದ ವಿಭಿನ್ನ ದಸರಾ ಆಚರಣೆ ವಿಡಿಯೋ ನೋಡಿ

ದಾವಣಗೆರೆ (Davangere) ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾರಥಿ ಕ್ಯಾಂಪ್​ನಲ್ಲಿರುವ ಗೌಳಿ ಸಮುದಾಯದಿಂದ ವಿಭಿನ್ನವಾಗಿ ದಸರಾ ಆಚರಿಸಲಾಯಿತು. ಸಾರಥಿ ಕ್ಯಾಂಪ್​ನಲ್ಲಿ 50ಕ್ಕೂ ಹೆಚ್ಚು ಗೌಳಿ ಕುಟುಂಬಗಳು ವಾಸವಾಗಿವೆ. ಗೌಳಿ ಸಮುದಾಯ ಹೈನುಗಾರಿಕೆಯೇ ಜೀವನಾಧಾರವಾಗಿದೆ. ಗೌಳಿ ಸಮುದಾಯದವರು ದಸರಾ ಅನ್ನು ಶಿಲ್ಲೇಂಗಾನ್ ಎಂದು ಕರೆಯುತ್ತಾರೆ.

ಶುಕ್ರವಾರ ಮನೆ ದಸರಾ ಆಚರಿಸಿದ ಗೌಳಿ ಸಮುದಾಯದವರು ಇಂದು (ಅ.13) ಹೊರ ದಸರಾ ಆಚರಿಸುತ್ತಾರೆ. ದಸರಾ ಹಿನ್ನೆಲೆಯಲ್ಲಿ ಸಮುದಾದಯದ ಪ್ರತಿಯೊಬ್ಬರು ಒಂಬತ್ತು ದಿನ ಉಪವಾಸ ವ್ರತ ಆಚರಿಸುತ್ತಾರೆ. ಒಂಬತ್ತು ದಿನ ಉಪವಾಸ ಇದ್ದು, ನಿತ್ಯ ದೇವರ ಪೂಜೆ ಮಾಡುತ್ತಾರೆ. ವಿಜಯದಶಮಿಯಂದು ಕುಲದೇವರನ್ನು ಕಂಬಳಿ ಗದ್ದಿಗೆ ಮೇಲೆ ಕೂರಿಸಿ ಪೂಜೆ ಮಾಡುತ್ತಾರೆ. ದೇವರಿಗೆ ನೈವೇದ್ಯ ರೂಪದಲ್ಲಿ ತುಪ್ಪದ ಅಭಿಷೇಕ ಮಾಡುತ್ತಾರೆ.

ಬಳಿಕ, ಪುರುಷರು ತಮ್ಮ ಸಮುದಾಯದ ಸಾಂಪ್ರದಾಯಿಕ ವೇಷ ತೊಟ್ಟು ದೇವರ ಎದುರು ಕೈಯ್ಯಲ್ಲಿ ಕತ್ತಿ, ದೊಣ್ಣೆ ಹಿಡಿದು ವೃತ್ತಾಕಾರವಾಗಿ ಗಜ ನೃತ್ಯ ಮಾಡುತ್ತಾರೆ. ಇನ್ನು ಮಹಿಳೆಯರು ಪುಗಡಿ ನೃತ್ಯ ಮಾಡುತ್ತಾರೆ. ಬಳಿಕ ಮಹಿಳೆಯರು ಬೀಸುವ ಕಲ್ಲಿನ ಹಿಟ್ಟಿನಿಂದ ದೇವರಿಗೆ ಪ್ರಸಾದ ತಯಾರಿಸಿ, ಅರ್ಪಿಸುತ್ತಾರೆ. ಅಂತಿಮವಾಗಿ ಅಂಬು ಹೊಡೆದು ಬನ್ನಿ ಮುಡಿಯುತ್ತಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Oct 13, 2024 10:15 AM