ಪ್ಯಾರಾಮೆಡಿಕಲ್ ಕೋರ್ಸ್ ಮಾಡಿದವರಿಗೆ ನೌಕರಿಗಳೇ ಸೃಷ್ಟಿಯಾಗಿಲ್ಲ, ನ್ಯಾಯಕ್ಕಾಗಿ ಮುಖ್ಯಮಂತ್ರಿಗಳ ಮೊರೆಹೊಕ್ಕ ವಂಚಿತರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 12, 2022 | 10:19 PM

ಸಂಬಂಧಪಟ್ಟ ಇಲಾಖೆಗೆ ಎಡತಾಕಿದರೆ, ನೀವು ಮಾಡಿರುವ ಕೋರ್ಸ್​ಗೆ ನೌಕರಿ ಸಿಗುವುದಿಲ್ಲ ಅಂತ ಹೇಳುತ್ತಾರಂತೆ. ನೌಕರಿ ಸಿಗುವುದಿಲ್ಲ ಅಂತಾದರೆ ಯಾವ ಪುರುಷಾರ್ಥಕ್ಕೆ ಪ್ಯಾರಾಮೆಡಿಕಲ್ ಕೋರ್ಸ್ ಆರಂಭಿಸಿದ್ದು ಅಂತ ಅವರು ಪ್ರಶ್ನಿಸುತ್ತಿದ್ದಾರೆ.

ನಮಗೆ ನ್ಯಾಯ ಬೇಕು, ನೌಕರಿ ಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ಈ ಯುವಕ ಯುವತಿಯರನ್ನು ನೋಡಿ. ಇವರೆಲ್ಲ, ಪ್ಯಾರಾಮೆಡಿಕಲ್ (paramedical) ವ್ಯಾಸಂಗ (ಡಿಪ್ಲೋಮಾ) ಪೂರೈಸಿದ್ದಾರೆ. ಇಲ್ಲಿ ಕಾಣುತ್ತಿರುವರು ಮಾತ್ರ ಅಲ್ಲ, ತಮ್ಮಂತೆ 5,000 ಜನ ಈ ವ್ಯಾಸಂಗ ಮಾಡಿದ್ದಾರೆ ಎಂದು ಇವರು ಹೇಳುತ್ತಾರೆ. ಆದರೆ ಕೋರ್ಸ್ ಮುಗಿಸಿ 7 ವರ್ಷ ಕಳೆದರೂ ಇವರಿಗೆ ನೌಕರಿಗಳಿಲ್ಲ (jobs). ಸಂಬಂಧಪಟ್ಟ ಇಲಾಖೆಗೆ ಎಡತಾಕಿದರೆ, ನೀವು ಮಾಡಿರುವ ಕೋರ್ಸ್​ಗೆ ನೌಕರಿ ಸಿಗುವುದಿಲ್ಲ ಅಂತ ಹೇಳುತ್ತಾರಂತೆ. ನೌಕರಿ ಸಿಗುವುದಿಲ್ಲ ಅಂತಾದರೆ ಯಾವ ಪುರುಷಾರ್ಥಕ್ಕೆ ಪ್ಯಾರಾಮೆಡಿಕಲ್ ಕೋರ್ಸ್ ಆರಂಭಿಸಿದ್ದು ಅಂತ ಅವರು ಪ್ರಶ್ನಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅವರು ಶನಿವಾರದಂದ ಮುಖ್ಯಮಂತ್ರಿಗಳನ್ನು ಕಾಣಲು ಬಂದಿದ್ದರು, ನಮಗೆ ನೌಕರಿ ಕೊಡಿ ಇಲ್ಲವೇ ದಯಾಮರಣಕ್ಕೆ (euthanasia ) ಅವಕಾಶ ನೀಡಿ ಎಂದು ಬೊಮ್ಮಾಯಿ ಅವರನ್ನು ಕೇಳಲು ಬಂದಿದ್ದವರಿಗೆ ಪೊಲೀಸರು ಅಡ್ಡಗಟ್ಟಿ ಮುಖ್ಯಮಂತ್ರಿಗಳನ್ನು ಕಾಣಲು ಬಿಟ್ಟಿಲ್ಲ.

ಆಗಲೇ ಯುವಕ-ಯುವತಿಯರು ಗೇಟ್ ಮುಂದೆ ಕೂತು ಪ್ರತಿಭಟನೆ ಆರಂಭಿಸಿದ್ದಾರೆ ಮತ್ತು ನ್ಯಾಯ ಕೊಡಿ ಅಂತ ಘೋಷಣೆ ಕೂಗಲಾರಂಭಿಸಿದ್ದಾರೆ. ಪ್ರಾಯಶಃ ಪ್ರತಿಭಟನೆ ನಡೆಸುತ್ತಿರರುವ ಸುದ್ದಿಯನ್ನು ಪೊಲೀಸರು ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ. ಬೊಮ್ಮಾಯಿ ಅವರು ಯುವಕ-ಯುವತಿರ ಪೈಕಿ ಮೂವರನ್ನು ತಮ್ಮ ನಿವಾಸಕ್ಕೆ ಕರೆತನ್ನಿ ಅಂತ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿಗಳನ್ನು ಕಾಣಲು ಹೋಗುವ ಮೊದಲು ಯುವಕರು ಮಾಧ್ಯಮದವರೊಂದಿಗೆ ಮಾತಾಡಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸದಿದ್ದರೆ, ಪ್ರತಿಭಟನೆ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ:   ಬಾಗಲಕೋಟೆ ಸರ್ಕಾರಿ ಶಾಲೆಯಲ್ಲಿ ನಮಾಜ್ ಮಾಡಿದ ವಿದ್ಯಾರ್ಥಿಗಳು! ವೈರಲ್ ಆದ ವಿಡಿಯೋ ಇಲ್ಲಿದೆ