ಶಿವಮೂರ್ತಿ ಮುರುಘಾಶರಣರಿಗೆ ಬೆಳ್ಳಿಯಲ್ಲಿ ತಯಾರಿಸಿದ ಅವರ ಪುತ್ಥಳಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ ಶಿಷ್ಯವೃಂದ ಮತ್ತು ಭಕ್ತರು
ಮುರುಘಾಶ್ರೀಗಳ ಪುತ್ಥಳಿಯನ್ನು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 21 ಅಂಗುಲ ಎತ್ತರವಿದ್ದು 20 ಕೆಜಿ ತೂಗುತ್ತದೆ.
ಮುರುಘಾಶ್ರೀಗಳ ಶಿಷ್ಯವೃಂದ ಮತ್ತು ಭಕ್ತರು ಮುರುಘಾಶ್ರೀಗಳ ಪೀಠಾರೋಹಣ ತೃತೀಯ ದಶಮಾನೋತ್ಸವ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರಿಗೆ ಮುರುಘಾಶ್ರೀ ಮಾದರಿಯ ಬೆಳ್ಳಿ ಪುತ್ಥಳಿ ಉಡುಗೊರೆ ನೀಡಿದ್ದಾರೆ. ಮುರುಘಾಶ್ರೀಗಳ ಪೀಠಾರೋಹಣ ತೃತೀಯ ದಶಮಾನೋತ್ಸವ ಹಿನ್ನೆಲೆಯಲ್ಲಿ ಅಕ್ಟೋಬರ್ 8ರಿಂದ 18ರ ವರೆಗೆ 10 ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ ಚಿತ್ರದುರ್ಗ ಮುರುಘಾಮಠದಲ್ಲಿ ನಡೆಯಿತು. ಸೋಮವಾರ ಉತ್ಸವದ ಕೊನೆಯ ದಿನವಾಗಿತ್ತು. ಈ ಸಂದರ್ಭದಲ್ಲಿ ಮಠದ ಅನುಭವ ಮಂಟಪದಲ್ಲಿ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗಲೇ ಭಕ್ತರು ಮತ್ತು ಶಿಷ್ಯವೃಂದ ಮುರುಘಾಶ್ರೀಗಳಿಗೆ ಬೆಳ್ಳಿಯಲ್ಲಿ ತಯಾರಿಸಿದ ಅವರ ಪುತ್ಥಳಿಯನ್ನು ಉಡುಗೊರೆಯಾಗಿ ನೀಡಿದರು.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪುತ್ಥಳಿಯನ್ನು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 21 ಅಂಗುಲ ಎತ್ತರವಿದ್ದು 20 ಕೆಜಿ ತೂಗುತ್ತದೆ. ಮುರುಘಾಶ್ರೀಗಳ ತದ್ರೂಪು ಬೆಳ್ಳಿ ಪುತ್ಥಳಿಯನ್ನು ನಾಯಕನಹಟ್ಟಿ ಗ್ರಾಮದ ಶಿಲ್ಪಿ ಮಹೇಶ್ ಆಚಾರ್ ನಿರ್ಮಿಸಿದ್ದಾರೆ.
ಮುರುಘಾಮಠದ ಅನುಭವ ಮಂಟಪದಲ್ಲಿ ಸೋಮವಾರ ಮುಕ್ತಾಯಗೊಂಡ ಶರಣ ಸಂಸ್ಕೃತಿ ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ‘ಬಸವ ಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ‘ಶರಣಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿಂತುಕೊಂಡೇ ಗೌರವ ಸ್ವೀಕರಿಸಿದ ಮುಖ್ಯಮಂತ್ರಿಯ ಸರಳತೆ ಎಲ್ಲರ ಗಮನ ಸೆಳೆಯಿತು. ಈ ವೇಳೆ ಬೊಮ್ಮಾಯಿ, ಬಿಎಸ್ವೈ ಭೇಟಿಯಾಗಬೇಕು ಎಂದು ಮಹಿಳೆಯೊಬ್ಬರು ಗಲಾಟೆ ಮಾಡುತ್ತಿದ್ದರು. ಮಹಿಳೆಯನ್ನು ಸುತ್ತುವರಿದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಹೊರಗೆ ಕರೆದೊಯ್ದರು.
ಇದನ್ನೂ ಓದಿ: Pragya Thakur: ನಾನು ಕಬಡ್ಡಿಯಾಡಿದ್ದನ್ನು ವಿಡಿಯೋ ಮಾಡಿದವರು ರಾವಣರು; ಬಿಜೆಪಿ ನಾಯಕಿ ಪ್ರಗ್ಯಾ ಠಾಕೂರ್ ಆಕ್ರೋಶ