ದೆಹಲಿಯಲ್ಲಿ ಡಿಕೆಶಿ ಬೆಂಬಲಿಗರ ಶಕ್ತಿ ಪ್ರದರ್ಶನ: ಇಂದು ರಾಹುಲ್ ಗಾಂಧಿ, ಖರ್ಗೆ ಮಹತ್ವದ ಮೀಟಿಂಗ್ ಸಾಧ್ಯತೆ

Updated on: Nov 25, 2025 | 7:59 AM

Karnataka Power Sharing Tussel: ಇದೀಗ ದೆಹಲಿ ಅಂಗಳದಲ್ಲಿ ಡಿಕೆ ಶಿವಕುಮಾರ್ ಬಣದ ಶಕ್ತಿ ಪ್ರದರ್ಶನ ನಡೆಯುತ್ತಿದ್ದರೆ, ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯ ಬಣದ ಪಗಡೆ ಆಟ ಜೋರಾಗಿದೆ. ರಾಹುಲ್ ಗಾಂಧಿ ಭೇಟಿ ವೇಳೆ ಸ್ಪಷ್ಟ ನಿರ್ದೇಶನ ಬರುತ್ತಾ ಅನ್ನೋ ನಿರೀಕ್ಷೆಯಿದೆ. ಹೀಗಾಗಿ, ಎರಡೂ ತಂಡಗಳೂ ಈಗ ಖರ್ಗೆ, ರಾಹುಲ್ ಭೇಟಿಯ ಮೇಲೆ ಚಿತ್ತ ನೆಟ್ಟಿದ್ದಾರೆ.

ಬೆಂಗಳೂರು, ನವೆಂಬರ್ 25: ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊತ್ತಿಕೊಂಡಿರುವ ನಾಯಕತ್ವ ಬದಲಾವಣೆಯ ಕಿಚ್ಚು ದೆಹಲಿಗೂ ವ್ಯಾಪಿಸಿದೆ. ದೆಹಲಿ ನಾಯಕರ ಎದುರೇ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವ ವಿಚಾರವಿದ್ದು ದೆಹಲಿಯಲ್ಲೇ ಲೆಕ್ಕ ಚುಕ್ತಾ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಬಣ ತಂತ್ರ ಹೂಡಿದೆ. ಇದೇ ಕಾರಣಕ್ಕೆ ದೆಹಲಿಗೆ ಈಗಾಗಲೇ ಡಿಕೆ ಬೆಂಬಲಿಗ ಶಾಸಕರ ಒಂದು ಗುಂಪು ತಲುಪಿ ಹೈಕಮಾಂಡ್‌ ನಾಯಕರ ಮುಂದೆ ಹಾಜರಾತಿ ಹಾಕಿತ್ತು. ಇದೀಗ ಮತ್ತೊಂದು ತಂಡ ದೆಹಲಿಯಲ್ಲಿ ಬೀಡುಬಿಟ್ಟಿದೆ. ಮಾಗಡಿ ಶಾಸಕ ಹೆಚ್​ಸಿ ಬಾಲಕೃಷ್ಣ, ಮದ್ದೂರು ಶಾಸಕ ಕದಲೂರು ಉದಯ್, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್​, ಹೊಸಕೋಟೆ ಶಾಸಕ ಶರತ್​ ಬಚ್ಚೇಗೌಡ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ಮತ್ತೊಂದೆಡೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ಮಧ್ಯೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಹೈಕಮಾಂಡ್ ನಾಯಕರಿಗೆ ತಲೆನೋವು ತಂದಿಟ್ಟಿದೆ. ಹೀಗಾಗಿ, ಮೂರು ದಿನ ರಾಜ್ಯ ನಾಯಕರ ಅಹವಾಲು ಆಲಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂದು ದೆಹಲಿಗೆ ತೆರಳುತ್ತಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆಗೆ ಸಭೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ