ಕರ್ನಾಟಕ ಕರಾವಳಿ ಆಗಲಿದೆ ಕೇರಳ, ಗೋವಾದಂತೆ ಟೂರಿಸಂ ಹಬ್: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ. ಕೇರಳ ಮತ್ತು ಗೋವಾ ಮಾದರಿಯಲ್ಲಿ ಕರಾವಳಿ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಹೊಸ ನೀತಿ ರೂಪಿಸಲಾಗುವುದು. ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಂಗಳೂರು, ಜನವರಿ 10: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆಯುತ್ತಿರುವ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಕೇರಳ ಮತ್ತು ಗೋವಾದಂತೆ ಕರಾವಳಿ ಭಾಗದ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವಲ್ಲಿ ಹಿಂದಿನ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ವಿಫಲವಾಗಿವೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ವೈಫಲ್ಯದಿಂದಾಗಿ ಮಂಗಳೂರು ಸೇರಿದಂತೆ ಕರಾವಳಿ ಭಾಗದ ಜನರು ಮುಂಬೈ, ದುಬೈ, ಬೆಂಗಳೂರು ಮತ್ತಿತರ ಕಡೆಗಳಿಗೆ ವಲಸೆ ಹೋಗುತ್ತಿದ್ದಾರೆ. ಸುಮಾರು 300 ಕಿಲೋಮೀಟರ್‌ಗೂ ಅಧಿಕ ಕರಾವಳಿ ತೀರವಿದ್ದರೂ, ಅದನ್ನು ಸರಿಯಾಗಿ ಬಳಸಿಕೊಳ್ಳದಿರುವುದು ಪ್ರಸ್ತುತ ಸಮಸ್ಯೆಗೆ ಕಾರಣ ಎಂದು ಡಿಕೆಶಿ ತಿಳಿಸಿದ್ದಾರೆ.
ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಎಲ್ಲರೂ ಆಸಕ್ತಿ ತೋರಿದ್ದಾರೆ. ಹಾಲಿ ಪ್ರವಾಸೋದ್ಯಮ ನೀತಿ ಕರಾವಳಿಗೆ ಸೂಕ್ತವಲ್ಲ. ಹೊಸ ನೀತಿ ರೂಪಿಸಲು ಅಧಿಕಾರಿಗಳು, ಉದ್ಯಮಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಖಾಸಗಿ ಹೂಡಿಕೆ ಮತ್ತು ಪಿಪಿಪಿ ಮಾದರಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

