ಮಾತು ಕೊಟ್ಟಿದ್ದೀರಿ, ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಪರೋಕ್ಷವಾಗಿ ಸಿಎಂಗೆ ಟಾಂಗ್ ಕೊಟ್ರಾ ಡಿಕೆ ಸುರೇಶ್!

Edited By:

Updated on: Jan 20, 2026 | 1:08 PM

ಡಿ.ಕೆ. ಸುರೇಶ್ ಅವರು ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ನಿಷ್ಠೆಯನ್ನು ಉಲ್ಲೇಖಿಸಿ, ಅಧಿಕಾರ ಹಂಚಿಕೆ ಕುರಿತು ಮಾರ್ಮಿಕ ಮಾತುಗಳನ್ನಾಡಿದ್ದಾರೆ. ಪಂಚಾಯಿತಿ ಚೇರ್ಮನ್‌ ಸ್ಥಾನಗಳ ಉದಾಹರಣೆ ನೀಡಿ, ಆರಂಭದಲ್ಲಿ ಅಧಿಕಾರ ಬೇಡವೆಂದರೂ ಸಿಕ್ಕಾಗ ಬಿಡಲು ಕಷ್ಟಪಡುತ್ತಾರೆ ಎಂದಿದ್ದು, ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರಾ ಎಂಬ ಪ್ರಶ್ನೆ ಮೂಡಿದೆ.

ಬೆಂಗಳೂರು, ಜನವರಿ 20: ಡಿಸಿಎಂ ಡಿಕೆ ಶಿವಕುಮಾರ್ ಅವರ ಪಕ್ಷ ನಿಷ್ಠೆ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಡಿಕೆ ಸುರೇಶ್, ಮಾತು ಕೊಟ್ಟಿದ್ದೀರಿ, ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಿವಕುಮಾರ್ ಅವರು ಯಾವಾಗಲೂ ಪಕ್ಷಕ್ಕೆ ನಿಷ್ಠರಾಗಿದ್ದಾರೆ ಹೊರತು ವ್ಯಕ್ತಿಗಳಿಗಲ್ಲ. ಪಕ್ಷ ಅಧಿಕಾರದಲ್ಲಿದ್ದಾಗ ಅಥವಾ ಇಲ್ಲದಿದ್ದಾಗಲೂ ಅವರು ಪಕ್ಷದ ಜೊತೆ ನಿಂತಿದ್ದಾರೆ ಮತ್ತು ಎಲ್ಲವನ್ನೂ ತಾಳ್ಮೆಯಿಂದ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಪಂಚಾಯಿತಿ ಚೇರ್ಮನ್‌ಗಳ ಉದಾಹರಣೆಯನ್ನು ನೀಡಿ ಮಾತನಾಡಿದ ಸುರೇಶ್, ಆರಂಭದಲ್ಲಿ ಚೇರ್ಮನ್ ಸ್ಥಾನ ಬೇಡ ಎನ್ನುತ್ತಾರೆ. ಆ ಸ್ಥಾನಕ್ಕೆ ಅರ್ಹತೆ ಪಡೆದ ನಂತರ ಅಥವಾ ಲಭ್ಯವಾದಾಗ ‘ಬೇಕೇ ಬೇಕು’ ಎಂದು ಪಟ್ಟು ಹಿಡಿಯುತ್ತಾರೆ. ಮಾತನ್ನು ಕೊಟ್ಟು ಒಮ್ಮೆ ಹುದ್ದೆ ಪಡೆದ ನಂತರ ಅದನ್ನು ಬಿಟ್ಟುಕೊಡುವುದು ಅಥವಾ ಇತರರನ್ನು ಮನವೊಲಿಸುವುದು ಬಹಳ ಕಷ್ಟಕರ. ಇದು ರಾಜಕಾರಣದಲ್ಲಿ ನಂಬಿಕೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದರು. ತಾವು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಬೆಳವಣಿಗೆಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ ಎಂದು ಸುರೇಶ್ ಸ್ಪಷ್ಟಪಡಿಸಿದರು. ಸುರೇಶ್ ಅವರು ಪಂಚಾಯಿತಿ ಚೇರ್ಮನ್ ಹುದ್ದೆಗಳ ವಿಚಾರ ಪ್ರಸ್ತಾಪಿಸಿ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೇ ಟಾಂಗ್ ಕೊಟ್ಟರಾ ಎಂಬ ಪ್ರಶ್ನೆ ಈಗ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ