ಮೋದಿ ಬಹಳ ಸುಂದರ ವ್ಯಕ್ತಿ, ಕೆಲಸದ ವಿಷಯದಲ್ಲಿ ಮಾತ್ರ ಕಿಲ್ಲರ್; ಗೆಳೆಯನನ್ನು ಹೊಗಳಿದ ಟ್ರಂಪ್
ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆದ ಜಿ7 (G7) ಶೃಂಗಸಭೆಯ ದ್ವಿಪಕ್ಷೀಯ ಮಾತುಕತೆಯ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು "ಏಂಜಲ್" ಹಾಗೂ "ಕಿಲ್ಲರ್" ಎಂದು ವಿಶಿಷ್ಟವಾಗಿ ಬಣ್ಣಿಸಿದ್ದಾರೆ. ಜಿ7 ಶೃಂಗಸಭೆಯ ಅಂತಿಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೋದಿಯವರ ವ್ಯಕ್ತಿತ್ವವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಎವಿಯಾನ್, ಜೂನ್ 17: ಫ್ರಾನ್ಸ್ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ (G7 Summit) ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಈ ವೇಳೆ ಟ್ರಂಪ್ ಪ್ರಧಾನಿ ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಮೋದಿ ನೋಡಲು ಅತ್ಯಂತ ಸುಂದರವಾದ ವ್ಯಕ್ತಿ. ಏಂಜಲ್ ರೀತಿ ಕಾಣುತ್ತಾರೆ. ಆದರೆ ಒಪ್ಪಂದಗಳ ವಿಷಯಕ್ಕೆ ಬಂದರೆ ಅವರು ಅಷ್ಟೇ ಕಠಿಣ ಮತ್ತು ಕಿಲ್ಲರ್. ಕಠಿಣ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅವರನ್ನು ಮೀರಿಸಲಾಗದು” ಎಂದು ಟ್ರಂಪ್ ತಮ್ಮದೇ ಶೈಲಿಯಲ್ಲಿ ಹೊಗಳಿದ್ದಾರೆ.
“ಮೋದಿ ನೋಡಲು ತುಂಬಾ ಶಾಂತವಾಗಿ ಕಾಣುವುದರಿಂದ, ತಮ್ಮ ಶಾಂತ ಸ್ವಭಾವ ಮತ್ತು ಕಠಿಣ ನಿಲುವುಗಳ ಮೂಲಕ ಎದುರಾಳಿಯನ್ನು ದಿಢೀರ್ ಆಗಿ ಆಶ್ಚರ್ಯಚಕಿತರನ್ನಾಗಿಸುತ್ತಾರೆ. ಜಗತ್ತಿನಲ್ಲಿ ಇಂತಹ ಗುಣ ಹೊಂದಿರುವ ಕೆಲವೇ ಕೆಲವು ಜನರಿದ್ದಾರೆ. ಜನರು ಇವರನ್ನು ತುಂಬಾ ಒಳ್ಳೆಯ ಮನುಷ್ಯ ಎನ್ನುತ್ತಾರೆ, ಬಹಳ ಇಷ್ಟಪಡುತ್ತಾರೆ. ಆದರೆ ವ್ಯಾಪಾರ ಮತ್ತು ದೇಶದ ಹಿತಾಸಕ್ತಿಯ ವಿಷಯ ಬಂದಾಗ ಇವರು ಅತ್ಯಂತ ಕಠಿಣವಾಗಿರುತ್ತಾರೆ” ಎಂದು ಟ್ರಂಪ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಭಾರತದ ಜನರನ್ನು ಎಷ್ಟು ಪ್ರೀತಿಸುತ್ತಾರೋ, ಅಷ್ಟೇ ಅಮೆರಿಕವನ್ನೂ ಪ್ರೀತಿಸುತ್ತಾರೆ ಎಂದು ಟ್ರಂಪ್ ಹೇಳಿದರು. ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, “ನಾವು ಹೂಸ್ಟನ್‌ನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮ ಮಾಡಿದ್ದೆವು. ಆಗ ಸ್ಟೇಡಿಯಂ ಸಂಪೂರ್ಣ ತುಂಬಿತ್ತು. ಭಾರತ ಹಾಗೂ ಅಮೆರಿಕದ ನಡುವೆ ಸದ್ಯ ಭಾರಿ ಪ್ರಮಾಣದ ವ್ಯಾಪಾರ ಒಪ್ಪಂದಗಳು ನಡೆಯುತ್ತಿವೆ ಮತ್ತು ನಾವು ಒಪ್ಪಂದದ ಅತ್ಯಂತ ಸಮೀಪದಲ್ಲಿದ್ದೇವೆ. ಭವಿಷ್ಯದಲ್ಲಿ ನಾನು ಖಂಡಿತವಾಗಿ ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡಲಿದ್ದೇನೆ” ಎಂದು ತಿಳಿಸಿದರು.
(Video Source: ANI)
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ