ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯರು
ತಮ್ಮ ವಿದ್ಯಾರ್ಥಿಗಳು ಸುತ್ತುವರಿದು, ಕೈ ಹಿಡಿದು ನೀವು ಹೋಗಬೇಡಿ ಸರ್ ಎಂದು ಕಣ್ಣೀರಿಡುತ್ತಿದ್ದರೆ ಕೃಷ್ಣಪ್ಪ ಕೂಡಾ ಭಾವುಕರಾಗಿದ್ದಾರೆ. ಬಿಡ್ರಮ್ಮಾ..ಹೋಗುವಾಗ ಅವರನ್ನು ಕಣ್ಣೀರು ಹಾಕಿಸಬೇಡಿ, ಅವರು ಬರ್ತಾ ಇರ್ತಾರೆ...
ತುಮಕೂರು: 22 ವರ್ಷಗಳಿಂದ ತುಮಕೂರು (Tumkur) ಜಿಲ್ಲೆಯ ಎಂಪ್ರೆಸ್ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಡಾ.ಕೃಷ್ಣಪ್ಪ ಅವರಿಗೆ ಮುಂಬಡ್ತಿ ಸಿಕ್ಕಿದೆ. ಗುಬ್ಬಿ ತಾ. ಅಂಕಸಂದ್ರ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಮುಂಬಡ್ತಿ ಪಡೆದಿರುವ ಡಾ. ಕೃಷ್ಣಪ್ಪ ಅವರಿಗೆ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭ ಮುಗಿಸಿ ಅವರು ಶಾಲೆಯ ಗೇಟಿನತ್ತ ಹೊರಡಬೇಕಾದರೆ ವಿದ್ಯಾರ್ಥಿನಿಯರು ತಮ್ಮ ಪ್ರೀತಿಯ ಶಿಕ್ಷಕರಲ್ಲಿ ಹೋಗ ಬೇಡಿ ಸರ್ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮ್ಮ ವಿದ್ಯಾರ್ಥಿಗಳು ಸುತ್ತುವರಿದು, ಕೈ ಹಿಡಿದು ನೀವು ಹೋಗಬೇಡಿ ಸರ್ ಎಂದು ಕಣ್ಣೀರಿಡುತ್ತಿದ್ದರೆ ಕೃಷ್ಣಪ್ಪ ಕೂಡಾ ಭಾವುಕರಾಗಿದ್ದಾರೆ. ಬಿಡ್ರಮ್ಮಾ..ಹೋಗುವಾಗ ಅವರನ್ನು ಕಣ್ಣೀರು ಹಾಕಿಸಬೇಡಿ, ಅವರು ಬರ್ತಾ ಇರ್ತಾರೆ ಎಂದು ಅಲ್ಲಿನ ಇತರ ಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿದರೂ ಮಕ್ಕಳ ಅಳು ನಿಲ್ಲಲಿಲ್ಲ. ವಿದ್ಯಾರ್ಥಿಗಳ ಗುಂಪಿನಿಂದ ಕೃಷ್ಣಪ್ಪ ಅವರನ್ನು ಮತ್ತೊಬ್ಬ ಶಿಕ್ಷಕರು ಕರೆದುಕೊಂಡು ಗೇಟಿನತ್ತ ಹೋಗುವಾಗಲೂ ವಿದ್ಯಾರ್ಥಿಗಳು ಕಣ್ಣೀರಿಡುತ್ತಾ ಹಿಂದೆ ಓಡಿದ್ದಾರೆ. ತಮ್ಮ ಕನ್ನಡಕ ತೆಗೆದು ಕಣ್ಣೀರು ಒರೆಸುತ್ತಾ ಕೃಷ್ಣಪ್ಪ ಆ ಶಾಲೆಯಿಂದ ಹೊರಹೋಗಿದ್ದಾರೆ. ಕೃಷ್ಣಪ್ಪ, ಇತ್ತೀಚೆಗಷ್ಟೇ ಹಂಪಿ ವಿವಿಯಿಂದ ಪಿ.ಹೆಚ್.ಡಿ. ಪದವಿ ಪಡೆದಿದ್ದರು. ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಶಿಕ್ಷಕರೆಂದು ಇಲಾಖೆಯಲ್ಲಿ ಗುರುತಿಸಿಕೊಂಡಿದ್ದ ಇವರು ವಿದ್ಯಾರ್ಥಿನಿಯರಿಗೆ ಅತ್ಯಂತ ಪ್ರೀತಿಪಾತ್ರವಾಗಿದ್ದ ಕನ್ನಡ ಶಿಕ್ಷಕರಾಗಿದ್ದರು.