ಮೇಕ್ ಇನ್ ಬಾಗಲಕೋಟೆ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಪುಟ್ಟ ಗ್ಯಾರೇಜಿನಲ್ಲಿ ತಯಾರಾಗಿದೆ ಅಂದರೆ ನಂಬ್ತೀರಾ?

ಮೇಕ್ ಇನ್ ಬಾಗಲಕೋಟೆ ಇಲೆಕ್ಟ್ರಿಕ್ ದ್ವಿಚಕ್ರ ವಾಹನ ಪುಟ್ಟ ಗ್ಯಾರೇಜಿನಲ್ಲಿ ತಯಾರಾಗಿದೆ ಅಂದರೆ ನಂಬ್ತೀರಾ?

TV9 Web
| Updated By: shruti hegde

Updated on: Oct 01, 2021 | 8:26 AM

ಇಕ್ಬಾಲ್ ಅವರ ಬುದ್ಧಿಮತ್ತೆಯಲ್ಲಿ ನಂಬಿಕೆ ಇಟ್ಟು ವಾಹನ ತಯಾರಿಸಲು ಅವರು ಕೇಳಿದ ವಸ್ತುಗಳಿಗೆಲ್ಲ ದೂಸರಾ ಮಾತಾಡದೆ ಹಣ ಒದಗಿಸಿರುವ ಜಲಗೇರಿ ಸಹ ಅಭಿನಂದನಾರ್ಹರು.

ಇದು ಇಲೆಕ್ಟ್ರಿಕ್ ವಾಹನಗಳ (ಇವಿ) ಜಮಾನಾ. ಹೆಸರಾಂತ ಮೋಟಾರು ಕಂಪನಿಗಳು ಅದಾಗಲೇ ಇವಿಗಳ ಉತ್ಪಾದನೆ ಶುರು ಮಾಡಿದ್ದು ಕೆಲ ಕಂಪನಿಗಳ ಸ್ಕೂಟರ್ಗಳು ಮಾರುಕಟ್ಟೆ ಪ್ರವೇಶಿಸಿವೆ. ಈ ವಾಹನಗಳಿಗೆ ನಾವು ಊಹಿಸಲು ಸಾಧ್ಯವಾಗದಷ್ಟು ಬೇಡಿಕೆಯಿದೆ. ಭಾವಿಷ್ ಆಗರ್ವಾಲ್ ಅವರ ಓಲಾ ಸಂಸ್ಥೆ ಯಾರಿಗೆ ತಾನೆ ಗೊತ್ತಿಲ್ಲ? ಅವರು ಇತ್ತೀಚಿಗೆ ಬಿಡುಗಡೆ ಮಾಡಿದ ಓಲಾ ಎಸ್ 1 ಮತ್ತು ಓಲಾ ಎಸ್1 ಪ್ರೊ ಇವಿಗಳು ಕೇವಲ ಎರಡು ದಿನಗಳಲ್ಲಿ 1,000 ಕೋಟಿ ರೂ. ಗಳಷ್ಟು ವ್ಯವಹಾರ ನಡೆಸಿವೆ! ಬಿಡಿ, ಅವರಲ್ಲಿ ಕಾರ್ಖಾನೆಗಳಿವೆ, ಕೆಲಸಗಾರರಿದ್ದಾರೆ ಮತ್ತು ಎಲ್ಲ ಬಗೆಯ ಉಪಕರಣಗಳೂ ಇವೆ. ಅದರೆ ಈ ವಿಡಿಯೋ ನೋಡಿ.

ನಿಮಗೆ ಕಾಣುತ್ತಿರುವ ಕೆಂಪು ವಾಹನವೂ ಒಂದು ಎಲೆಕ್ಟ್ರಿಕ್ ವಾಹನ. ಅದು ತಯಾರಾಗಿದ್ದು ಈ ಪುಟ್ಟ ಗ್ಯಾರೇಜಿನಲ್ಲಿ, ಮತ್ತು ಇಲ್ಲಿ ಕೂತು ಕೆಲಸ ಮಾಡುತ್ತಿದ್ದಾರಲ್ಲ ಅವರೇ ಇದರ ಸೃಷ್ಟಿಕರ್ತ. ಅವರ ಹೆಸರು ಮೊಹಮ್ಮದ್ ಇಕ್ಬಾಲ್. ಅಂದಹಾಗೆ, ಇಕ್ಬಾಲ್ ತಯಾರಿಸಿರುವ ವಾಹನವನ್ನು ಓಡಿಸುತ್ತಿರುವ ಇವರ ಹೆಸರು ಮಂಜುನಾಥ ಜಲಗೇರಿ.

ವಾಹನದ ಉತ್ಪಾದನೆಗೆ ಹಣ ಹೂಡಿದ ಜಲಗೇರಿ ಅವರು ಬಾಗಲಕೋಟೆಯಲ್ಲಿ ಒಂದು ಪ್ರಿಂಟಿಂಗ್ ಪ್ರೆಸ್ ನಡೆಸುತ್ತಾರೆ.

ಇಕ್ಬಾಲ್ ಕೇವಲ ಐಟಿಐ ಓದಿರುವ ಒಬ್ಬ ಇಲೆಕ್ಟ್ರಿಶಿಯನ್. ಆದರೆ ಅವರ ತಲೆ ಯಾವುದೇ ಮೇಧಾವಿ ಇಂಜಿನೀಯರ್ ಗಿಂತ ಕಮ್ಮಿಯಿಲ್ಲ. ಸೂಕ್ತವಾದ ಉಪಕರಣಗಳಿಲ್ಲದೆ, ತನ್ನಲ್ಲಿರುವ ಸ್ಪ್ಯಾನರ್, ಸ್ಕ್ರೂ ಡ್ರೈವರ್ ಮತ್ತು ಕಟ್ಟಿಂಗ್ ಪ್ಲೇಯರ್ಗಳ ಸಹಾಯದಿಂದ ಅವರು ಬೈಕ್ ತಯಾರಿಸಿದ್ದಾರೆ.

ಇಕ್ಬಾಲ್ ಅವರ ಬುದ್ಧಿಮತ್ತೆಯಲ್ಲಿ ನಂಬಿಕೆ ಇಟ್ಟು ವಾಹನ ತಯಾರಿಸಲು ಅವರು ಕೇಳಿದ ವಸ್ತುಗಳಿಗೆಲ್ಲ ದೂಸರಾ ಮಾತಾಡದೆ ಹಣ ಒದಗಿಸಿರುವ ಜಲಗೇರಿ ಸಹ ಅಭಿನಂದನಾರ್ಹರು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಜಲಗೇರಿ ಅವರು ಸುಮಾರು ರೂ. 40,000 ಗಳಿಂದ ರೂ. 50,000 ವರೆಗೆ ಹಣ ಹೂಡಿದ್ದಾರೆ.

ಇವರಿಬ್ಬರ ಅವಿರತ ಪ್ರಯತ್ನ, ಪರಿಶ್ರಮ ಮತ್ತು ಛಲದಿಂದ ಮೇಕ್ ಇನ್ ಇಂಡಿಯಾದಂತೆ ಮೇಕ್ ಇನ್ ಬಾಗಲಕೋಟೆ ಇಲೆಕ್ಟ್ರಿಕ್ ವಾಹನ ತಯಾರಾಗಿ ನಗರದಲ್ಲಿ ಓಡಾಡುತ್ತಿದೆ. ಬ್ರ್ಯಾಂಡೆಡ್ ಇವಿಗಳ ಬೆಲೆ ರೂ. 1 ಲಕ್ಷದಷ್ಟಿದ್ದರೆ ಇಕ್ಬಾಲ್ ಕೇವಲ ರೂ. 50,000 ಗಳಲ್ಲಿ ಅದನ್ನು ತಯಾರಿಸಿದ್ದಾರೆ.

ಇದನ್ನೂ ಓದಿ:  ಈ ಸಲ ಕಪ್ ನಮ್ದೇ; ಚಾಮುಂಡಿಬೆಟ್ಟದಲ್ಲಿ ಆರ್​ಸಿಬಿ ಅಭಿಮಾನಿಗಳಿಂದ ಪೂಜೆ, ವಿಡಿಯೋ ವೈರಲ್