ಘೀಳಿಡುತ್ತಾ ಕಾರನ್ನು ಅಟ್ಟಾಡಿಸಿದ ಒಂಟಿ ಸಲಗ: ಬೆಚ್ಚಿದ ಪ್ರವಾಸಿಗರು, ಸ್ವಲ್ಪದರಲ್ಲೇ ಪಾರು
ಪ್ರವಾಸಿಗರ ಕಾರಿನ ಮೇಲೆ ಒಂಟಿ ಸಲಗ ದಾಳಿ ಮಾಡಲು ಮುಂದಾದ ಘಟನೆ ಕರ್ನಾಟಕ–ತಮಿಳುನಾಡು ಗಡಿ ಭಾಗದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರು ಅನಗತ್ಯವಾಗಿ ರಸ್ತೆ ಬಳಿ ನಿಲ್ಲದಂತೆ ಹಾಗೂ ಸಲಗವನ್ನು ಪ್ರಚೋದಿಸದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಚಾಮರಾಜನಗರ, ಜನವರಿ 27: ಕರ್ನಾಟಕ–ತಮಿಳುನಾಡು ಗಡಿ ಭಾಗದಲ್ಲಿ ಒಂಟಿ ಸಲಗದ ಉಪಟಳ ಮತ್ತೆ ಆತಂಕ ಮೂಡಿಸಿದೆ. ತಮಿಳುನಾಡಿನ ಸತ್ಯಮಂಗಲ ಟೈಗರ್ ರಿಸರ್ವ್ ಅರಣ್ಯದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದ ಘಟನೆಯಲ್ಲಿ, ಒಂಟಿ ಸಲಗವು ಪ್ರಯಾಣಿಕರ ಕಾರನ್ನು ಅಟ್ಟಾಡಿಸಿದೆ. ಕಾಡಿನೊಳಗಿಂದ ಹೊರಬಂದ ಸಲಗವು ರಸ್ತೆ ಮೇಲೆ ಸಂಚರಿಸುತ್ತಿದ್ದ ವಾಹನಗಳತ್ತ ದಾಳಿ ಮಾಡಲು ಯತ್ನಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ.
ಸತ್ಯಮಂಗಲ ಟೈಗರ್ ರಿಸರ್ವ್ ಅರಣ್ಯವು ಬಿಳಿಗಿರಿ ಟೈಗರ್ ರಿಸರ್ವ್ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶವಾಗಿದ್ದು, ಈ ಭಾಗದಲ್ಲಿ ಒಂಟಿ ಸಲಗದ ಸಂಚಾರ ಆಗಾಗ ಕಂಡುಬರುತ್ತಿದೆ. ಕಾಡಿನಿಂದ ಹೊರಬಂದು ಮುಖ್ಯ ರಸ್ತೆಗೆ ಬರುವ ಸಲಗದಿಂದ ಸ್ಥಳೀಯರು ಹಾಗೂ ಪ್ರಯಾಣಿಕರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಒಂಟಿ ಸಲಗವು ಯಾವ ಕ್ಷಣದಲ್ಲಾದರೂ ಕರ್ನಾಟಕ ಗಡಿ ದಾಟಿ ಪ್ರವೇಶಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕರ್ನಾಟಕ ಅರಣ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಗಡಿ ಭಾಗದಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವಾಹನ ಸಂಚಾರದ ಮೇಲೆ ನಿಗಾ ವಹಿಸಲಾಗಿದೆ.
