Star hotels in Ayodhya: ಅಯೋಧ್ಯೆಯಲ್ಲಿ ತಲೆಯೆತ್ತಲಿವೆ ಸ್ಟಾರ್ ಹೋಟೆಲ್​ಗಳು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕಾರ್ಯ ವರ್ಷಾಂತ್ಯಕ್ಕೆ ಪೂರ್ಣ

Star hotels in Ayodhya: ಅಯೋಧ್ಯೆಯಲ್ಲಿ ತಲೆಯೆತ್ತಲಿವೆ ಸ್ಟಾರ್ ಹೋಟೆಲ್​ಗಳು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕಾರ್ಯ ವರ್ಷಾಂತ್ಯಕ್ಕೆ ಪೂರ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 30, 2023 | 8:11 AM

ರಾಮಮಂದಿರ ನಿರ್ಮಾಣ ಮುಂದಿನ ವರ್ಷ ಜನೆವರಿವರೆಗೆ ಕೊನೆಗೊಳ್ಳಲಿದೆ. ಇದೇ ವರ್ಷ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಸಹ ಸಂಪೂರ್ಣಗೊಳ್ಳಲಿದೆ

ಅಯೋಧ್ಯೆ (Ayodhya) ಎಲ್ಲರೂ ಅಂದುಕೊಳ್ಳುವಷ್ಟು ದೊಡ್ಡ ನಗರವೇನೂ ಅಲ್ಲ ಅಲ್ಲಿನ ಜನಸಂಖ್ಯೆ ಸುಮಾರು 60,000 ದಷ್ಟಿದೆ. ಆದರೆ, ರಾಮಮಂದಿರ (Ram Mandir) ನಿರ್ಮಾಣ ಕಾರ್ಯ ಆರಂಭವಾದಾಗಿನಿಂದ ನಗರದ ವರ್ಚಸ್ಸು, ಪ್ರತಿಷ್ಠೆ ಮುಗಿಲೆತ್ತರ ತಲುಪಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಸ್ಟಾರ್ ಹೋಟೆಲ್ ಚೇನ್ ಗಳ ಮಾಲೀಕರು ಪಂಚತಾರಾ ಹೋಟೆಲ್ ಆರಂಭಿಸುವ ಯೋಚನೆಯಲ್ಲಿದ್ದಾರೆ. ತಾಜ್ ಹೋಟೆಲ್ ಗ್ರೂಪ್ (Taj Hotel Group) ಅಯೋಧ್ಯೆಯಲ್ಲಿ ಮೂರು ಹೊಟೆಲ್ ಗಳನ್ನು ಆರಂಭಿಸುವ ನಿರ್ಧಾರ ಮಾಡಿದ್ದು ಇವುಗಳ ನಿರ್ಮಾಣ ಕಾರ್ಯ 2027ರ ಹೊತ್ತಿಗೆ ಕೊನೆಗೊಳ್ಳಬಹುದೆಂದು ಹೇಳಲಾಗುತ್ತಿದೆ.

‘ತಾಜ್ ಗುಂಪಿನವರು ಹೋಟೆಲ್ ಗಳನ್ನು ಆರಂಭಿಸಲು ಅರ್ಜಿ ಸಲ್ಲಿಸಿದ್ದಾರೆ, ತಮ್ಮ ಜಿಂಜರ್ ಗ್ರೂಪ್ ಮೂಲಕ ಹೋಟೆಲ್ ಗಳನ್ನು ನಿರ್ಮಿಸುವ ಇರಾದೆ ಅವರಿಗಿದೆ. ಈ ನಿಟ್ಟಿನಲ್ಲಿ ಅವರು ಈಗಾಗಲೇ ಕಾರ್ಯೋನ್ಮುಖಗೊಂಡಿದ್ದಾರೆ,’ ಎಂದು ಆರ್ ಪಿ ಯಾದವ್ ಹೆಸರಿನ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಶಿಂದೆ ನಮ್ಮ ಜತೆ ಹಿಂದೆಂದೂ ಅಯೋಧ್ಯೆಗೆ ಬಂದಿರಲಿಲ್ಲ, ಶ್ರೀರಾಮ ದೇಶದ್ರೋಹಿಗಳಿಗೆ ಆಶೀರ್ವಾದ ಮಾಡುವುದಿಲ್ಲ: ರಾವತ್

ರಾಮಮಂದಿರ ನಿರ್ಮಾಣ ಮುಂದಿನ ವರ್ಷ ಜನೆವರಿವರೆಗೆ ಕೊನೆಗೊಳ್ಳಲಿದೆ. ಇದೇ ವರ್ಷ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಸಹ ಸಂಪೂರ್ಣಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಅಯೋಧ್ಯೆ ಒಂದು ದೊಡ್ಡ ಪ್ರವಾಸಿ ಕ್ಷೇತ್ರವಾಗಿ ಬೆಳೆಯಲಿರುವ ಅಂಶವನ್ನು ಗಮನದಲ್ಲಿಟ್ಟುಕೊಂಡು 3-ಸ್ಟಾರ್ ನಿಂದ 7-ಸ್ಟಾರ್ ಹೋಟೆಲ್ ಗಳು ತಲೆಯೆತ್ತುವ ನಿರೀಕ್ಷೆ ಇದೆ.

‘ಉನ್ನತ ಮತ್ತು ಶ್ರೀಮಂತ ವರ್ಗದ ಜನ ಸೇರಿದಂತೆ ಎಲ್ಲ ವರ್ಗದ ಜನ ಅಯೋಧ್ಯೆಗೆ ಬರಲಿದ್ದಾರೆ. ಕೆಳ ಮಧ್ಯಮ ವರ್ಗದ ಜನರಿಗೆ ಸ್ಟಾರ್ ಹೋಟೆಲ್ ಗಳು ದುಬಾರಿ ಅನಿಸಬಹುದು ಹಾಗೆಯೇ ಉನ್ನತ ವರ್ಗದ ಜನರು ಸ್ಟಾರ್ ಹೋಟೆಲ್ ಗಳನ್ನು ಬಯಸುತ್ತಾರೆ. ನಾನು ಹೇಳುವುದೇನೆಂದರೆ, ಇಲ್ಲಿಗೆ ಎಲ್ಲ ವರ್ಗಗಳ ಜನರು ಬರಲಿದ್ದಾರೆ ಮತ್ತು ಅವರವರ ಸಾಮರ್ಥ್ಯಕ್ಕನುಗಿಣವಾಗಿ ಹೋಟೆಲ್ ಗಳು ಬೇಕು,’ ಎಂದು ರಾಮಪ್ರಸ್ಥ ಹೋಟೆಲ್ ವ್ಯವಸ್ಥಾಪಕ ಲಕ್ಷ್ಮಿಕಾಂತ್ ಪಾಂಡೆ ಹೇಳುತ್ತಾರೆ.

3-ತಾರಾ ಮತ್ತು ಪಂಚತಾರಾ ಹೋಟೆಲ್ ಗಳಿಗೆ ಬೇಡಿಕೆ ಇದೆಯಾ ಎಂದು ಕೇಳಿದರೆ, 3, 4, 5-ಸ್ಟಾರ್ ಹೋಟೆಲ್ ಗಳಿಗೆ ಬೇಡಿಕೆಯಿದೆ ಅಂತ ಅವರು ಹೇಳುತ್ತಾರೆ.

ಇದನ್ನೂ ಓದಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ: ಬೈಜೂಸ್ ಸಿಇಒ ಬೈಜು ರವೀಂದ್ರನ್ ಮನೆ, ಕಚೇರಿ ಮೇಲೆ ಇಡಿ ದಾಳಿ

‘ರಾಮಮಂದಿರ ನಿರ್ಮಾಣಗೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನ ಇಲ್ಲಿಗೆ ಆಗಮಿಸಲಿರುವುದರಿಂದ ಹೋಟೆಲ್ ಗಳಿಗೆ ಬೇಡಿಕೆ ಹೆಚ್ಚಲಿದೆ. ಉತ್ತಮ ಗುಣಮಟ್ಟದ ಹೋಟೆಲ್ ಗಳ ಸಂಖ್ಯೆ ಹೆಚ್ಚಿದಷ್ಟು ಜನರಿಗೆ ಪ್ರಯೋಜನಕಾರಿ. ಶ್ರೀಮಂತ ವರ್ಗದ ಜನ ಇಲ್ಲಿಗೆ ಬಂದಾಗ ಉತ್ತಮ ಹೋಟೆಲ್ ಗಳಿಲ್ಲದ ಕಾರಣ ಇಲ್ಲಿ ಉಳಿದುಕೊಳ್ಳದೆ ವಾಪಸ್ಸು ಹೋಗಿಬಿಡುತ್ತಾರೆ. ಆದರೆ ತಾಜ್ ಗ್ರೂಪ್ ನವರು ಹೋಟೆಲ್ ಆರಂಭಿಸಿದರೆ ಅವರು ಅಲ್ಲಿ ಉಳಿದುಕೊಳ್ಳುತ್ತಾರೆ,’ ಎಂದು ಗೋರಖ್ ಪುರದಿಂದ ಅಗಮಿಸಿರುವ ಭಕ್ತ ರಾಜ್ ಕಿಶೋರ್ ಪಾಠಕ್ ಹೇಳುತ್ತಾರೆ.

ಅಯೋಧ್ಯೆ ಉತ್ತರ ಪ್ರದೇಶದ ಒಂದು ಪ್ರಮುಖ ಪುಣ್ಯಕ್ಷೇತ್ರವಾಗಿದೆ. ವಾರಣಾಸಿಯ ನಂತರ ರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆಗೆ ಗರಿಷ್ಠ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ