ಲಸಿಕೆ ಬೇಡವೆಂದು ಆಕೆ ಮನೆಯಿಂದ ಆಚೆ ಓಡಿದಳು, ಕುಟುಂಬಸ್ಥರು ಬೆನ್ನಟ್ಟಿ ಹಿಡಿದು ಅದನ್ನು ಹಾಕಿಸಿಯೇ ಬಿಟ್ಟರು!!
ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಲಸಿಕೆ ಹಾಕಿಸಿಕೊಳ್ಳಲು ಖಡಾಖಂಡಿತವಾಗಿ ನಿರಾಕರಿಸಿದಾಗ ಅವರ ಮನೆಯವರು ಮಾಡಿದ್ದೇನು ಅಂತ ವಿವರಿಸುವ ವಿಡಿಯೋ ಇದು
ಇನ್ನು ಮುಂದೆ ಈ ತೆರನಾದ ದೃಶ್ಯಗಳು ಸಾಮಾನ್ಯವಾಗಲಿವೆ. ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುವ ಇಲ್ಲವೇ ನಖರಾ ತೋರುವ ಜನರಿಗೆ-ಅದು ಮಹಿಳೆ ಆಗಿರಬಹುದು ಅಥವಾ ಪುರುಷ, ಬಲವಂತದಿಂದ ಬಲ ಪ್ರಯೋಗಿಸಿ ಆರೋಗ್ಯ ಇಲಾಖೆಯವರು ಲಸಿಕೆ ಹಾಕಲಿದ್ದಾರೆ. ಹೀಗೆ ಮಾಡುವುದು ಅನಿವಾರ್ಯವೂ ಹೌದು. ಯಾಕೆಂದರೆ, ಲಸಿಕೆ ಹಾಕಿಸಿಕೊಳ್ಳದವರಿಂದ ಅದನ್ನು ಹಾಕಿಸಿಕೊಂಡವರಿಗೆ ಅಪಾಯವಿದೆ. ಕೊವಿಡ್ ವೈರಸ್ ಹೊಸ ರೂಪಾಂತರಿ ಒಮೈಕ್ರಾನ್ ಸೋಂಕಿನ ಪ್ರಕರಣಗಳು ಇನ್ನೂ ಭಾರತದಲ್ಲಿ ಪತ್ತೆಯಾಗಿಲ್ಲ. ಹಾಗಂತ ನಾವು ನಿರಾಳದಿಂದಿರುವುದು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಸೋಂಕಿನ ಮೂರನೇ ಅಲೆ ಇದೇ ರೂಪಾಂತರಿಯಿಂದ ಸೃಷ್ಟಿಯಾಗಲಿದೆ ಎಂದು ವೈದ್ಯರು ಮತ್ತು ಪರಿಣಿತರು ಹೇಳುತ್ತಿದ್ದಾರೆ.
ಸರಿ, ನಮಗೊಂದು ಸ್ವಾರಸ್ಯಕರ ವಿಡಿಯೋ ಲಭ್ಯವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಲಸಿಕೆ ಹಾಕಿಸಿಕೊಳ್ಳಲು ಖಡಾಖಂಡಿತವಾಗಿ ನಿರಾಕರಿಸಿದಾಗ ಅವರ ಮನೆಯವರು ಮಾಡಿದ್ದೇನು ಅಂತ ವಿವರಿಸುವ ವಿಡಿಯೋ ಇದು. ಮಂಡ್ಯ ಜಿಲ್ಲೆಯ ಹಳ್ಳಿಯೊಂದಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ ಧನಂಜಯ ತಮ್ಮ ಸಿಬ್ಬಂದಿಯೊಂದಿಗೆ ತೆರಳಿದಾಗ ಗ್ರಾಮಸ್ಥರಲ್ಲಿ ಕೆಲವರು ಆವಾಜ್ ಹಾಕಿದ್ದಾರೆ ಹೆದರಿಸಿದ್ದಾರೆ ಮತ್ತು ಮನೆಬಿಟ್ಟು ಓಡುವ ಪ್ರಯತ್ನವನ್ನೂ ಮಾಡಿದ್ದಾರೆ. ಡಾ ಧನಂಜಯ ಪ್ರತಿಯೊಂದು ಮನೆಗೆ ತೆರಳಿ ಲಸಿಕೆಯ ಮಹತ್ವವನ್ನು ತಾಳ್ಮೆಯಿಂದ ವಿವರಿಸಿದ್ದಾರೆ.
ಆದರೂ ಒಂದಷ್ಟು ಜನ ಹಟ ಪ್ರದರ್ಶಿಸಿದ್ದಾರೆ. ಈ ಮಹಿಳೆ ಸಹ ಹಾಗೆ ಮಾಡಿ ಓಡಲು ಪ್ರಯತ್ನಿಸಿದಾಗ ಆಕೆಯ ಕುಟುಂಬಸ್ಥರೇ ಆಕೆಯನ್ನು ಹಿಡಿದು ನಡುಬೀದಿಯಲ್ಲಿ ನೆಲಕ್ಕೆ ಕೊಡವಿ ಆರೋಗ್ಯ ಕಾರ್ಯಕರ್ತರಿಂದ ಲಸಿಕೆ ಹಾಕಿಸಿಯೇ ಬಿಟ್ಟಿದ್ದಾರೆ. ಆಕೆಯ ಕುಟುಂಬಸ್ಥರಿಗೆ ಒಂದು ಸಲಾಂ ಹೇಳಲೇಬೇಕು.
ಇದನ್ನೂ ಓದಿ: ವಿಡಿಯೋದಲ್ಲಿ ಇರುವ ಶೇ.80ರಷ್ಟು ಭಾಗ ಫೇಕ್: ಎಸ್ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪದ ಬಗ್ಗೆ ಗೋಪಾಲಕೃಷ್ಣ ಪ್ರತಿಕ್ರಿಯೆ