ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಹಲವಾರು ಏರಿಳಿತ ಕಂಡ ನಂತರ ಈಗ ಬದುಕು ನೆಲೆ ಕಂಡುಕೊಂಡಂತೆ ಭಾಸವಾಗುತ್ತಿದೆ: ಶುಭಾ ಪೂಂಜಾ
ಕಷ್ಟಗಳಲ್ಲಿ ಬೆಳೆದಿದ್ದರಿಂದ ಸಮಸ್ಯೆಗಳನ್ನು ನಿಭಾಯಿಸುವುದು ಸುಲಭವಾಯಿತು. ಈಗ ಯಶ ಕಾಣುತ್ತಿದ್ದೇನೆ ಮತ್ತು ಅದು ಎಲ್ಲ ನೋವುಗಳನ್ನು ಮರೆಸುತ್ತದೆ ಎಂದು ಶುಭಾ ಹೇಳಿದರು.
ಶುಭಾ ಪೂಂಜಾ ಖುಷಿಯಾಗಿದ್ದಾರೆ, ಗೆಲುವಾಗಿದ್ದಾರೆ. ಕಳೆದ 14 ವರ್ಷಗಳಲ್ಲಿ ಒಬ್ಬ ನಟಿಯಾಗಿ ಅವರು ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಅವರೇ ಆಂಗೀಕರಿಸುವ ಹಾಗೆ ಕರೀಯರ್ ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಗುರುವಾರ ನಡೆದ ರೈಮ್ಸ್ ಚಿತ್ರದ ಪ್ರೆಸ್ ಮೀಟ್ನಲ್ಲಿ ವೃತ್ತಿಜೀವನ, ಪರ್ಸೊನಲ್ ಬದುಕು ಮತ್ತು ನಿರ್ಮಾಪಕಿಯಾಗಿ ಕೆಲಸ ಮಾಡಿದ ಅನುಭವದ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.
‘ಕರೋನಾ ಹಾವಳಿ ಕಡಿಮೆಯಾದಾಗಿನಿಂದ ಮನಸ್ಸು ಮತ್ತು ದೇಹ ನಿರಾಳವಾಗಿವೆ ಮತ್ತು ಬದುಕು ಈಗ ಬಹಳಷ್ಟು ಬದಲಾಗಿದೆ. ಆಫ್ಕೋರ್ಸ್ ಮದುವೆಯಾಗುತ್ತಿರುವ ಸಂತೋಷವಂತೂ ಇದ್ದೇ ಇದೆ. ಕರೀಯರ್ ಜೊತೆಗೆ ವೈಯಕ್ತಿಕ ಬದುಕಿನಲ್ಲಿ ಹಲವಾರು ಏಳು ಬೀಳುಗಳನ್ನು ಕಂಡ ನಂತರ ಜೀವನ ಈ ಹಂತಕ್ಕೆ ಬಂದು ನಿಂತಿದೆ. ನನಗೆ ಎದುರಾದ ಕಷ್ಟಗಳು ಸಮಸ್ಯೆಗಳಿಂದ ಸಾಕಷ್ಟು ಪಾಠಗಳು ಕಲಿತು ಈಗ ಬದುಕಿನಲ್ಲಿ ಒಂದು ನೆಲೆ ಕಂಡಕೊಂಡಂತೆ ಭಾಸವಾಗುತ್ತಿದೆ,’ ಎಂದು ಶುಭಾ ಹೇಳಿದರು. ದೆರ್ ಈಸ್ ಲೈಟ್ ಎಟ್ ದಿ ಎಂಡ್ ಆಫ್ ಟನೆಲ್ ಎಂಬ ಆಂಗ್ಲ ನಾಣ್ಣುಡಿಯನ್ನು ಅವರು ಉಲ್ಲೇಖಿಸಿದರು.
ಇಂಡಸ್ಟ್ರೀ ಬಂದಾಗ ಅಪ್ರಬುದ್ಧಳಾಗಿದ್ದೆ, ಆಗೆಲ್ಲ ಅಭದ್ರತೆ ಕಾಡುತಿತ್ತು, ಆದರೆ ಈಗ ಅಂಥ ಸ್ಥಿತಿ ಇಲ್ಲ. ವೃತ್ತಿಬದುಕಿನಲ್ಲಿ ಮುಂದೆ ಸಾಗಿದಂತೆಲ್ಲ ಪ್ರಬುದ್ದತೆ ಮೈಗೂಡಿಸಿಕೊಂಡೆ. ಕಷ್ಟಗಳಲ್ಲಿ ಬೆಳೆದಿದ್ದರಿಂದ ಸಮಸ್ಯೆಗಳನ್ನು ನಿಭಾಯಿಸುವುದು ಸುಲಭವಾಯಿತು. ಈಗ ಯಶ ಕಾಣುತ್ತಿದ್ದೇನೆ ಮತ್ತು ಅದು ಎಲ್ಲ ನೋವುಗಳನ್ನು ಮರೆಸುತ್ತದೆ ಎಂದು ಶುಭಾ ಹೇಳಿದರು.
ಶುಭಾ ಅವರು ಕನ್ನಡ ಸಿನಿಮಾವೊಂದರ ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದು ಆ ಅನುಭವ ಬಹಳ ಚೆನ್ನಾಗಿತ್ತು ಮತ್ತು ಅದರಿಂದಲೂ ಬೇಕಾದಷ್ಟು ಕಲಿಯಲು ಸಿಕ್ಕಿತು ಅಂತ ಹೇಳಿದರು. ಕೊನೆಯಲ್ಲಿ ತನ್ನ ಪ್ರತಿಭೆಗೆ ಸವಾಲಾಗುವಂಥ ಪಾತ್ರ ಸಿಗದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.