ಸಚಿವ ಮಲ್ಲಿಕಾರ್ಜುನ್ ಕಾಲಿಗೆ ಬಿದ್ದ ಪರಿಷತ್ ಬಿಜೆಪಿ ಅಭ್ಯರ್ಥಿ ಸುರೇಶ್ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಪರಿಷತ್ ಚುನಾವಣೆ ವೇಳೆ ಸಚಿವ ಮಲ್ಲಿಕಾರ್ಜುನ್ ಕಾಲಿಗೆ ಬಿದ್ದ ಬಿಜೆಪಿ ಅಭ್ಯರ್ಥಿ ಸುರೇಶ್ ನಡೆ ವಿರುದ್ಧ ಬಿಜೆಪಿ ಶಾಸಕ ಬಿ.ಪಿ. ಹರೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಕ್ಷದ ವರಿಷ್ಠರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ನವರು ಪಾಕಿಸ್ತಾನದವರಾ ಅಂತಾ ಸುರೇಶ್ ಕೇಳುತ್ತಾನೆ. ನಿಷ್ಠಾವಂತ ಬಿಜೆಪಿಗೆ ನಿಜವಾದ ಕಾಕ್ರೋಚ್ ಸುರೇಶ್ ಆಗಿದ್ದು, ಗೌರವಯುತ ಮೇಲ್ಮನೆಗೆ ಇಂತಹವರನ್ನ ಕಳಸಬೇಕಲ್ಲ ಅಂತ ನೋವಿದೆ ಎಂದವರು ಹೇಳಿದ್ದಾರೆ.
ದಾವಣಗೆರೆ, ಅಕ್ಟೋಬರ್ 25: ಪರಿಷತ್ ಬಿಜೆಪಿ ಅಭ್ಯರ್ಥಿ ಕೆಎಂ ಸುರೇಶ್, ಸಚಿವ ಮಲ್ಲಿಕಾರ್ಜುನ್ ಕಾಲಿಗೆ ಬಿದ್ದ ಘಟನೆ ಸಂಬಂಧ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಮಲ್ಲಿಕಾರ್ಜುನ್ ಕಾಲಿಗೆ ಬಿಜೆಪಿ ಅಭ್ಯರ್ಥಿ ನಮಸ್ಕಾರ ಮಾಡಿದ್ದರಿಂದ ಸ್ವಾಭಿಮಾನಿ ಕಾರ್ಯಕರ್ತರಿಗೆ ತೀವ್ರ ನೋವಾಗಿದೆ. ಶೀಘ್ರದಲ್ಲೇ ಬಿಜೆಪಿ ಉಸ್ತುವಾರಿಗಳು ರಾಜ್ಯಕ್ಕೆ ಬರಲಿದ್ದು, ಈ ಎಲ್ಲದರ ಬಗ್ಗೆ ಅವರಿಗೆ ದೂರು ನೀಡುವೆ. ಭ್ರಷ್ಟ, ರೈತರ ರಕ್ತ ಕುಡಿಯುವ ಸಚಿವ ಮಲ್ಲಿಕಾರ್ಜುನ್ ಕಾಲಿಗೆ ಆಗ್ನೇಯ ಪದವೀಧರ ಕ್ಷೇತ್ರದ ಮತದಾನದ ವೇಳೆ ಸುರೇಶ್ ನಮಸ್ಕರಿಸಿದ್ದಾರೆ. ಸಂಸದೆ ಪ್ರಭಾ ಮುಂದೆಯೂ ನಿಮ್ಮ ಸಹಕಾರ ಇರಲಿ ಅಂತಾರೆ. ಇನ್ನು ರೇಣುಕಾಚಾರ್ಯ ನೋಡಿದ ತಕ್ಷಣವೂ ಸಚಿವರಿಗೆ ಏನು ಆನಂದ? ಸಾರ್ವಜನಿಕಸ್ಥಳ ಆಗದಿದ್ರೆ ರೇಣುಕಾಚಾರ್ಯಗೆ ಜಯಲಕ್ಷ್ಮೀ ಕಿಸ್ ಕೊಟ್ಟ ಹಾಗೆ ಕೊಡುತ್ತಿದ್ದರೋ ಏನೋ? ಎಂದವರು ಕಿಡಿ ಕಾರಿದ್ದಾರೆ.
ಬಿಜೆಪಿ ಬಗ್ಗೆ ಎ ಟೀಮ್ ಬಿ ಟೀಮ್ ಅಂತ ಸಚಿವರು ಹೇಳಿದ್ದಾರೆ. ಆದರೆ BJP ಕಟ್ಟಿದೇನೆ ಅನ್ನೋ ಮಹಾಶಯ ಕಾಂಗ್ರೆಸ್‌ನ ಬಿ ಟೀಮ್ ಆಗಿತ್ತು ಎಂದು ಮಾಜಿ ಸಚಿವ ರವೀಂದ್ರನಾಥ ವಿರುದ್ಧವೂ ಹರೀಶ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಬಿ ಟೀಮ್ ಶಾಮನೂರು ಮನೆತನದವರು. ಅವರ ಮನೆತನದವರು ಚುನಾವಣೆಗೆ ನಿಂತ್ರೆ ಲಗಾನ್ ಟೀಮ್ ಬೆಂಬಲ ನೀಡುತ್ತೆ. ಲಗಾನ್ ಟೀಮ್ ಅಭ್ಯರ್ಥಿ ನಿಂತಾಗ ಶಾಮನೂರು ಕುಟುಂಬ ಅವರಪರವಿರುತ್ತೆ. ಇದರಿಂದ ನಮ್ಮ ಕಾರ್ಯಕರ್ತರಿಗೆ ತುಂಬಾ ನೋವಾಗುತ್ತೆ. ಕಾಂಗ್ರೆಸ್ನವರು ಪಾಕಿಸ್ತಾನದವರಾ ಅಂತಾ ಸುರೇಶ್ ಕೇಳುತ್ತಾನೆ. ಕಾಕ್ರೋಚ್ ಜನತಾ ಪಕ್ಷದವರು ಭಾರತದವರೇ. ಆದ್ರೆ ಅವರಿಗೆ ವಿದೇಶದಿಂದ ಹಣ ಬರುತ್ತಿದೆ. ನಿಷ್ಠಾವಂತ ಬಿಜೆಪಿಗೆ ನಿಜವಾದ ಕಾಕ್ರೋಚ್ ಸುರೇಶ್ ಆಗಿದ್ದು, ಗೌರವಯುತ ಮೇಲ್ಮನೆಗೆ ಇಂತಹವರನ್ನ ಕಳಸಬೇಕಲ್ಲ ಅಂತ ನೋವಿದೆ. ಇಂತ ಕಾಕ್ರೋಚ್‌ಗಳಿಗೆ ನಮ್ಮ ಪಕ್ಷದವರು ಟಿಕೆಟ್ ಹೇಗೆ ಕೊಡ್ತಾರೋ? ಎಂದವರು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

