ನಿಷೇಧ ನಡುವೆಯೂ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ

Edited By:

Updated on: Apr 09, 2025 | 1:00 PM

ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಖಾಸಗಿ ವಾಹನಗಳ ಪ್ರವೇಶ ನಿಷೇಧವಿದ್ದರೂ, ಮಲಯಾಳಂ ಚಿತ್ರತಂಡವು ಚಿತ್ರೀಕರಣಕ್ಕಾಗಿ ವಾಹನ ಸಮೇತ ಬೆಟ್ಟದ ಮೇಲೆ ಬಂದಿದೆ. ಸ್ಥಳೀಯರಿಗೆ ವಾಹನ ಪ್ರವೇಶ ನಿರ್ಬಂಧಿಸಿರುವ ಅರಣ್ಯ ಇಲಾಖೆ ಚಿತ್ರತಂಡಕ್ಕೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ.

ಚಾಮರಾಜನಗರ, ಏಪ್ರಿಲ್​ 08: ಗುಂಡ್ಲುಪೇಟೆ (Gundlupet) ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (Bandipur Tiger Reserve Forest) ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಆದರೂ ಕೂಡ, ಮಲಯಾಳಂ ಸಿನಿಮಾ ತಂಡವೊಂದು 3 ಬಸ್, 1 ಜೀಪ್​ನಲ್ಲಿ ಗೋಪಾಲಸ್ವಾಮಿ ಬೆಟ್ಟದ ಮೇಲೆ ಬಂದಿದೆ. ಅಲ್ಲದೇ, ಚಿತ್ರಿಕರಣವನ್ನೂ ಆರಂಭಿಸಿದೆ. ರಾಜ್ಯ ಸರ್ಕಾರ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ನಿಯಮದ ಪ್ರಕಾರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಕ್ಕೆ ಪ್ರವೇಶವಿಲ್ಲ. ಹೀಗಾಗಿ, ಬೆಟ್ಟದ ಮೇಲೆ ಸ್ಥಳೀಯರ ವಾಹನಗಳ ಪ್ರವೇಶವನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ. ಹೀಗಿರುವಾಗ, ಏಕಾಏಕಿ ಮಲಯಾಳಂ ಸಿನಿಮಾದವರ ವಾಹನಗಳು ಬೆಟ್ಟದ ಮೇಲೆ ತೆರಳಲು ಅನುಮತಿ ಏಕೆ ನೀಡಲಾಯಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಹಸುಗಳನ್ನು ಮೇಯಲು ಬಿಟ್ಟರೆ ಕೇಸ್ ಹಾಕುತ್ತೀರಿ. ಕೇರಳದ ಸಿನಿಮಾ ತಂಡಕ್ಕೆ ಹೇಗೆ ಅನುಮತಿ ನೀಡಿದ್ದೀರಿ?” ಎಂದು ಬಂಡೀಪುರ ಸಿಎಫ್ ಪ್ರಭಾಕರನ್​ ಅವರಿಗೆ ಪರಿಸರ ಪ್ರೇಮಿಗಳು ಮತ್ತು ರೈತರು ಪ್ರಶ್ನಿಸಿದ್ದಾರೆ.

Published on: Apr 08, 2025 08:29 PM