ನಿದ್ರಾಕ್ರಮ ಸರಿಯಾಗಿರಲು ಕೆಲವು ಸರಳ ಕ್ರಮಗಳನ್ನು ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ವಿವರಿಸಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 24, 2021 | 4:30 PM

ರಾತ್ರಿ ಊಟ ಮಾಡಿದ ಕೂಡಲೇ ಹಾಸಿಗೆ ಉರುಳೋದು ತಪ್ಪು, ಡಿನ್ನರ್ ಮತ್ತು ನಮ್ಮ ಮಲಗುವ ಸಮಯದ ನಡುವೆ ಕನಿಷ್ಟ 4 ತಾಸುಗಳ ಅಂತರವಿರಬೇಕು ಎಂದು ಸೌಜನ್ಯ ಹೇಳುತ್ತಾರೆ.

ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಇಂದು ನಿದ್ರೆ ಮಾಡುವುದರ ಬಗ್ಗೆ ಮಾತಾಡಿದ್ದಾರೆ. ಮನುಷ್ಯನಿಗೆ ಗಾಳಿ, ನೀರು, ಆಹಾರಗಳಷ್ಟೇ ನಿದ್ರೆಯೂ ಮುಖ್ಯ, ನಾವೆಲ್ಲ ಆರೋಗ್ಯ ಮತ್ತು ಲವಲವಿಕೆಯಿಂದ ಇರಬೇಕಾದರೆ ದಿನಕ್ಕೆ 6-8 ತಾಸುಗಳ ನಿದ್ರೆ ಅತಿಮುಖ್ಯ ಎಂದು ಡಾ ಸೌಜನ್ಯ ಹೇಳುತ್ತಾರೆ. ಸರಿಯಾದ ನಿದ್ರೆಯಾಗದಿದ್ದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ, ನಿದ್ದೆಗೆಟ್ಟೆವು ಬುದ್ಧಿಗೆಟ್ಟೆವು ಅನ್ನೋ ಮಾತು ಅಕ್ಷರಶಃ ಸತ್ಯ ಎಂದು ಅವರು ಹೇಳುತ್ತಾರೆ.

ಹಾಗಾದರೆ ಒಳ್ಳೆಯ ನಿದ್ರೆ ಮಾಡಬೇಕಾದರೆ ನಾವೇನು ಮಾಡಬೇಕು?

ರಾತ್ರಿ ಊಟ ಮಾಡಿದ ಕೂಡಲೇ ಹಾಸಿಗೆ ಉರುಳೋದು ತಪ್ಪು, ಡಿನ್ನರ್ ಮತ್ತು ನಮ್ಮ ಮಲಗುವ ಸಮಯದ ನಡುವೆ ಕನಿಷ್ಟ 4 ತಾಸುಗಳ ಅಂತರವಿರಬೇಕು ಎಂದು ಸೌಜನ್ಯ ಹೇಳುತ್ತಾರೆ. ಹಾಗೆಯೇ, ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದು ಒಳ್ಳೆಯದು.

ನಮ್ಮ ನಿಗದಿತ ಮಲಗುವ ಸಮಯಕ್ಕೆ ಒಂದು ಗಂಟೆ ಮೊದಲು ಗ್ಯಾಜೆಟ್ಗಳಿಂದ ದೂರವಾಗಬೇಕು. ಲ್ಯಾಪ್ಟಾಪ್, ಫೋನು ಮೊದಲಾವುಗಳನ್ನು ಬೆಡ್ ರೂಮಿನಿಂದ ದೂರವಿಟ್ಟು ನಮ್ಮ ಮೆದುಳನ್ನು ನಿದ್ರೆಗೆ ಅಣಿಗೊಳಿಸಬೇಕು ಎಂದು ಡಾ ಸೌಜನ್ಯ ಹೇಳುತ್ತಾರೆ. ಮಲಗುವ ಮೊದಲು ಸ್ನಾನ ಮಾಡಿದರೆ ಒಳ್ಳೆಯ ನಿದ್ರೆ ಬರುತ್ತದೆ. ಹಾಗೆಯೇ, ಮಲಗುವ ಮೊದಲು ದಿನದಲ್ಲಿ ನಡೆದ ಹತ್ತು ಉತ್ತಮ ಅಂಶಗಳನ್ನು ಮೆಲಕು ಹಾಕಬೇಕು, ಪಾಸಿಟಿವ್ ಯೋಚನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ನಿದ್ರೆಗೆ ಜಾರಬೇಕು.

ಮಲಗಲು ಹೋಗುವ ಮೊದಲು 5-10 ನಿಮಿಷಗಳಷ್ಟು ಲಘುವಾದ ಯೋಗಗಳನ್ನು ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಉತ್ತಮ ನಿದ್ರೆಗೆ ಸಹಾಕಾರಿ ಎಂದ ಸೌಜನ್ಯ ಹೇಳುತ್ತಾರೆ. 10 ನಿಮಿಷಗಳ ಧ್ಯಾನ (ಮೆಡಿಟೇಶನ್) ಮಾಡಿ ಮನಸ್ಸಿಗೆ ಹಿತವೆನಿಸದ ಯಾವುದೇ ಆಲೋಚನೆಯನ್ನು ಮನಸ್ಸಿಗೆ ತಂದುಕೊಳ್ಳದೆ ನಿದ್ರೆ ಮಾಡಿದರೆ, ಬೆಳಗ್ಗೆ ಏಳುವಾಗ ಮೈಮನವೆಲ್ಲ ಹಗುರವಾಗಿರುತ್ತದೆ ಎಂದು ಡಾ ಸೌಜನ್ಯ ಹೇಳುತ್ತಾರೆ.

ಇದನ್ನೂ ಓದಿ:  ತನ್ನದೇ ಭಾಷೆಯಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ರಾಯನ್ ರಾಜ್ ಸರ್ಜಾ; ವಿಡಿಯೋ ನೋಡಿ