ಜನರಲ್ ರಾವತ್ ಅವರ ಇಬ್ಬರು ಪುತ್ರಿಯರು ಕೃತಿಕಾ ಮತ್ತು ತರಿಣಿ ತಂದೆ-ತಾಯಿಗಳ ಚಿತೆಗೆ ಅಗ್ನಿಸ್ಪರ್ಶ ಮಾಡಿದರು
ಜನರಲ್ ರಾವತ್ ಮತ್ತು ಅವರ ಪತ್ನಿಯವರ ದೇಹಗಳನ್ನು ಒಂದೇ ಚಿತೆಯ ಮೇಲೆ ಅಕ್ಕಪಕ್ಕದಲ್ಲಿ ಇರಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಜನರಲ್ ರಾವತ್ ಅವರಿಗೆ 17 ತೋಪಿನ ಗೌರವ ಸಲ್ಲಿಸಲಾಯಿತು.
ಬುಧವಾರದಂದು ತಮಿಳುನಾಡಿನ ಕುನೂರ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರುಂತವೊಂದರಲ್ಲಿ ದಾರುಣ ಸಾವನ್ನಪ್ಪಿದ ರಕ್ಷಣಾ ಪಡೆಗಳ ಚೀಫ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಧರ್ಮಪತ್ನಿ ಮಧುಲಿಕಾ ರಾವತ್ ಅವರ ಅಂತಿಮ ಸಂಸ್ಕಾರ ದೆಹಲಿಯ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಶುಕ್ರವಾರದಂದು ನೆರವೇರಿಸಲಾಯಿತು. ರಾವತ್ ದಂಪತಿಗಳಿಗೆ ಗಂಡು ಸಂತಾನವಿಲ್ಲದ ಕಾರಣ ಅವರ ಪುತ್ರಿಯರು ಕೃತಿಕಾ ಮತ್ತು ತರಿಣಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿದರು.
ಜನರಲ್ ರಾವತ್ ಮತ್ತು ಅವರ ಪತ್ನಿಯವರ ದೇಹಗಳನ್ನು ಒಂದೇ ಚಿತೆಯ ಮೇಲೆ ಅಕ್ಕಪಕ್ಕದಲ್ಲಿ ಇರಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಜನರಲ್ ರಾವತ್ ಅವರಿಗೆ 17 ತೋಪಿನ ಗೌರವ ಸಲ್ಲಿಸಲಾಯಿತು. ಭಾರತೀಯ ಸೇನೆ ಮೂರು ಪಡೆಗಳ ಸುಮಾರು 800ಕ್ಕೂ ಹೆಚ್ಚು ಸಿಬ್ಬಂದಿ ಜನರಲ್ ರಾವತ್ ಅವರ ಮಿಲಿಟರಿ ಶವಸಂಸ್ಕಾರದಲ್ಲಿ ಭಾಗವಹಿಸಿದ್ದರು.2233 ಫೀಲ್ಡ್ ರೆಜಿಮೆಂಟ್ನ ಸಿಬ್ಬಂದಿ ಜನರಲ್ ರಾವತ್ ಅವರ ಗೌರವಾರ್ಥ ತೋಪುಗಳನ್ನು ಸಿಡಿಸಿತು.
ಜನರಲ್ ರಾವತ್ ಮತ್ತು ಅವರ ಪತ್ನಿಯವರ ದೇಹಗಳನ್ನು ಚಿತಾಗಾರಕ್ಕೆ ಸಾಗಿಸುವಾಗ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನ ‘ಭಾರತ್ ಮಾತಾ ಕೀ ಜೈ’ ಅಂತ ಘೋಷಣೆಗಳನ್ನು ಕೂಗುತ್ತಾ ಮತ್ತು ರಾಷ್ಟ್ರಧ್ವಜವನ್ನು ಬೀಸುತ್ತಾ ತಮ್ಮ ಅಂತಿಮ ನಮನಗಳನ್ನು ಸಲ್ಲಿಸಿದರು.
ದೆಹಲಿಯ ಕಂಟೋನ್ಮೆಂಟ್ ಪ್ರದೇಶವನ್ನು ತಲುಪುವ ಮೊದಲು ಹೂವುಗಳಿಂದ ಸಿಂಗರಿಸಲ್ಪಟ್ಟು ದೇಹಗಳನ್ನು ಹೊತ್ತಿದ್ದ ಮಿಲಿಟರಿ ವಾಹನವು ರಾಷ್ಟ್ರ ರಾಜಧಾನಿಯ ರಸ್ತೆಗಳಲ್ಲಿ ಬಹಳ ನಿಧಾನವಾಗಿ ಚಲಿಸುತಿತ್ತು.
ಅಂತಿಮ ವಿಧಿವಿಧಾನಗಳನ್ನು ಪೂರೈಸುವ ಮೊದಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಆವರು ಚಿತಾಗಾರಕ್ಕೆ ಆಗಮಿಸಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.