ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್

|

Updated on: Jan 13, 2025 | 7:14 AM

BBL 2025: ಬಿಗ್ ಬ್ಯಾಷ್ ಲೀಗ್ ನ 32ನೇ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಗ್ಲೆನ್ ಮ್ಯಾಕ್ಸ್ ವೆಲ್ ಅವರ ಅರ್ಧಶತಕದ ನೆರವಿನಿಂದ 165 ರನ್ ಕಲೆಹಾಕಿತು‌. ಈ ಗುರಿ ಬೆನ್ನತ್ತಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 123 ರನ್ ಗಳಿಗೆ ಆಲೌಟ್ ಆಗಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಅಬ್ಬರ ಮುಂದುವರೆದಿದೆ. ಈ ಬಾರಿ ಸಿಡಿಲಬ್ಬರದೊಂದಿಗೆ ಬಿಗ್ಗೆಸ್ಟ್ ಸಿಕ್ಸ್ ಸಿಡಿಸಿ ದಾಖಲೆಯನ್ನು ಸಹ ಬರೆದಿದ್ದಾರೆ. ಬಿಬಿಎಲ್​​ನ 32ನೇ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ರೆನೆಗೇಡ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆದರೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದರು. ರೆನೆಗೇಡ್ಸ್ ಬೌಲರ್‌ಗಳನ್ನು ಚೆಂಡಾಡಿದ ಮ್ಯಾಕ್ಸಿ ಸಿಕ್ಸ್ ಫೋರ್ ಗಳ ಸುರಿಮಳೆಗೈದರು. ಅದರಲ್ಲೂ ಕೇನ್ ರಿಚರ್ಡ್ಸನ್ ಎಸೆದ ಪಂದ್ಯದ 17ನೇ ಓವರ್​ನ 2ನೇ ಎಸೆತದಲ್ಲಿ ಮ್ಯಾಕ್ಸ್​ವೆಲ್ ಡೀಪ್ ಮಿಡ್ ವಿಕೆಟ್ ನತ್ತ ರಾಕೆಟ್ ಸಿಕ್ಸ್ ಬಾರಿಸಿದರು‌. ಈ ಸಿಕ್ಸ್ ನೊಂದಿಗೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತೀ ದೂರದ ಸಿಕ್ಸ್ ಬಾರಿಸಿದ ದಾಖಲೆ ಮ್ಯಾಕ್ಸಿ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಲಿನ್ ಹೆಸರಿನಲ್ಲಿತ್ತು. ಲಿನ್ 121 ಮೀಟರ್ ಉದ್ದದ ಸಿಕ್ಸ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ 122 ಮೀಟರ್ ಉದ್ದದ ಸಿಕ್ಸ್ ಸಿಡಿಸುವ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ ಹೊಸ ಇತಿಹಾಸ ರಚಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ 52 ಎಸೆತಗಳಲ್ಲಿ 10 ಸಿಕ್ಸ್ ಗಳೊಂದಿಗೆ 90 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 20 ಓವರ್‌ಗಳಲ್ಲಿ 165 ರನ್ ಕಲೆಹಾಕಿತು‌. ಈ ಗುರಿ ಬೆನ್ನತ್ತಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 123 ರನ್ ಗಳಿಗೆ ಆಲೌಟ್ ಆಗಿ 42 ರನ್ ಗಳಿಂದ ಸೋಲೊಪ್ಪಿಕೊಂಡಿದೆ.

Published on: Jan 13, 2025 07:13 AM