ಯತ್ನಾಳ್ ಮೊದಲು ತನ್ನ ಪಕ್ಷದಲ್ಲಿನ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ, ಆಮೇಲೆ ಬೇರೆಯವರ ಬಗ್ಗೆ ಮಾತಾಡಲಿ: ಡಿಕೆ ಶಿವಕುಮಾರ
ಬಹಳ ಅವಸರದಲ್ಲಿದ್ದಂತೆ ಕಂಡ ಕಾಂಗ್ರೆಸ್ ನಾಯಕ ನಿಂತುಕೊಂಡು ಮಾತಾಡುವ ಸೈರಣೆಯನ್ನೂ ಪ್ರದರ್ಶಿಸಲಿಲ್ಲ. ನಡೆಯುತ್ತಲೇ ಮಾತಾಡುತ್ತಾ ಯತ್ನಾಳ್ರಂಥ ಮೆಂಟಲ್ ಕೇಸ್ ಗಳಿಗೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಬೆಂಗಳೂರು: ಗುತ್ತಿಗೆದಾರ ಸಂತೋಷ ಕೆ ಪಾಟೀಲ ಸಾವಿನ ಪ್ರಕರಣದಲ್ಲಿ ಆರೋಪಿ ಎನ್ನಲಾಗುತ್ತಿರುವ ಕೆ ಎಸ್ ಈಶ್ವರಪ್ಪನವರು (KS Eshwarappa) ರಾಜೀನಾಮೆ ನೀಡುವ ಘೋಷಣೆ ಮಾಡಿದ ಬಳಿಕ ವಿಜಯದ ನಗೆ ಬೀರುತ್ತಿರುವ ಕಾಂಗ್ರೆಸ್ ನಾಯಕರು ಮುಂದಿನ ಹೋರಾಟಕ್ಕೆ ತಯಾರಾಗುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಈಶ್ವರಪ್ಪ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಗುರುವಾರ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಶುಕ್ರವಾರ ಲವಲವಿಕೆಯಿಂದ ಓಡಾಡುತ್ತಿದ್ದರು. ಬಿಜೆಪಿ ನಾಯಕ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಡಿಕೆಶಿ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಆ ಹಿನ್ನೆಲೆಯಲ್ಲೇ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರರೊಬ್ಬರು ಶಿವಕುಮಾರರಿಂದ ಪ್ರತಿಕ್ರಿಯೆ ಪಡೆಯಲು ಮಾತಾಡಿಸಿದರು.
ಬಹಳ ಅವಸರದಲ್ಲಿದ್ದಂತೆ ಕಂಡ ಕಾಂಗ್ರೆಸ್ ನಾಯಕ ನಿಂತುಕೊಂಡು ಮಾತಾಡುವ ಸೈರಣೆಯನ್ನೂ ಪ್ರದರ್ಶಿಸಲಿಲ್ಲ. ನಡೆಯುತ್ತಲೇ ಮಾತಾಡುತ್ತಾ ಯತ್ನಾಳ್ರಂಥ ಮೆಂಟಲ್ ಕೇಸ್ ಗಳಿಗೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದರು. ಅವರು ಪ್ರತಿಸಲ ನಿಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರಲ್ಲ, ಅಂತ ಶಿವಕುಮಾರರಿಗೆ ಹೇಳಿದಾಗ, ನನ್ನನ್ನು ನೆನಸಿಕೊಳ್ಳುತ್ತಾ ಇರೋದೇ ಅವರಿಗೆ ಇಷ್ಟ ಅನಿಸುತ್ತೆ, ನೆನಸಿಕೊಳ್ಳಲಿ ಬಿಡಿ, ಎಂದರು.
ಅವರನ್ನು ಹಿಂಬಾಲಿಸಿದ ವರದಿಗಾರರು, ನಿಮ್ಮಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿ ಇದೆಯಂತೆ, ನಮ್ಮಲ್ಲೂ ಅಂಥವರೊಬ್ಬರಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆಂದು ಅವರಿಗೆ ತಿಳಿಸಿದಾಗ, ಮೊದಲು ಅವರಲ್ಲಿರುವ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ ಆಮೇಲೆ ಬೇರೆಯವರ ಬಗ್ಗೆ ಮಾತಾಡಲಿ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಯಾವತ್ತೂ ಕೀಳುಮಟ್ಟದ ರಾಜಕಾರಣ ಮಾಡಿದವರಲ್ಲ ಎಂದರು ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ್