ಮೈಸೂರು ಬಳಿಯ ವೀರನಹೊಸಹಳ್ಳಿಗೆ ನುಗ್ಗಿತೊಂದು ಕಾಡಾನೆ, ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ!

ಮೈಸೂರು ಬಳಿಯ ವೀರನಹೊಸಹಳ್ಳಿಗೆ ನುಗ್ಗಿತೊಂದು ಕಾಡಾನೆ, ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ಹರಸಾಹಸ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 15, 2022 | 7:30 PM

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡಲೇ ವೀರನಹೊಸಹಳ್ಳಿಗೆ ದೌಡಾಯಿಸಿದ್ದಾರೆ. ಆದರೆ ಅವರ ಹಲವು ಪ್ರಯತ್ನಗಳ ಹೊರತಾಗಿಯೂ ಕಾಡಾನೆ ಕಾಡೊಳಗೆ ವಾಪಸ್ಸು ಹೋಗಲು ಸಿದ್ಧವಿರಲಿಲ್ಲವಂತೆ. ಅಂತಿಮವಾಗಿ ಅವರ ಭಗೀರಥ ಪ್ರಯತ್ನದ ಬಳಿಕ ಆನೆ ತನ್ನ ಸ್ವಸ್ಥಾನಕ್ಕೆ ತೆರಳಿದೆ.

ಮೈಸೂರು ಮತ್ತು ಹಾಸನ ಜಿಲ್ಲೆಗಳ ಕಾಡಿನಂಚಿಗೆ ಅಥವಾ ಕಾಡಿಗೆ ಹೊಂದಿಕೊಂಡಿರುವ ಗ್ರಾಮೀಣ ಭಾಗದ ಊರುಗಳಲ್ಲಿ ಕಾಡಾನೆಗಳು, ಚಿರತೆಗಳು ಕಾಣಿಸಿಕೊಳ್ಳವುದು ಮೊದಲು ಅಪರೂಪಕ್ಕೊಮ್ಮೆ ನಡೆಯುವ ಘಟನೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ನಿಯಮಿತವಾಗಿ ಊರು ಪ್ರವೇಶಿಸುತ್ತಿವೆ. ಈ ವಿಡಿಯೋ ನೋಡಿ ಮಾರಾಯ್ರೇ. ಮೈಸೂರಿನ ಅರಣ್ಯ ಪ್ರದೇಶದಿಂದ ವೀರನಹೊಸಹಳ್ಳಿ ಹೆಸರಿನ ಗ್ರಾಮಕ್ಕೆ ಒಂಟಿ ಸಲಗವೊಂದು ಪ್ರವೇಶಿಸಿಬಿಟ್ಟಿದೆ. ಗ್ರಾಮದ ಜನ ಹೋಯ್ ಹೋಯ್ ಅಂತ ಗಲಾಟೆ ಶುರುಮಾಡುತ್ತಿದ್ದಂತೆ ಅದು ಅಲ್ಲಿಂದ ಓಡಲಾರಂಭಿಸಿದೆ. ಆದರೆ ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸಲಗ ಊರಿಂದ ಹೊರಗೆ ಓಡಿದೆಯಾದರೂ ಕಾಡಿನೊಳಕ್ಕೆ ವಾಪಸ್ಸು ಹೋಗಿಲ್ಲ. ಹೆದರಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಕೂಡಲೇ ವೀರನಹೊಸಹಳ್ಳಿಗೆ ದೌಡಾಯಿಸಿದ್ದಾರೆ. ಆದರೆ ಅವರ ಹಲವು ಪ್ರಯತ್ನಗಳ ಹೊರತಾಗಿಯೂ ಕಾಡಾನೆ ಕಾಡೊಳಗೆ ವಾಪಸ್ಸು ಹೋಗಲು ಸಿದ್ಧವಿರಲಿಲ್ಲವಂತೆ. ಅಂತಿಮವಾಗಿ ಅವರ ಭಗೀರಥ ಪ್ರಯತ್ನದ ಬಳಿಕ ಆನೆ ತನ್ನ ಸ್ವಸ್ಥಾನಕ್ಕೆ ತೆರಳಿದೆ.

ಆನೆಯೇನೋ ಕಾಡಿಗೆ ವಾಪಸ್ಸು ಹೋಯಿತು. ಅದರೆ, ಜನರ ಸಮಸ್ಯೆ ಮಾತ್ರ ಹಾಗೆಯೇ ಇದೆ. ತಮಗೆ ವನ್ಯಜೀವಿಗಳ ಕಾಟದಿಂದ ಶಾಶ್ವತ ಪರಿಹಾರ ಬೇಕೆಂದು ಅರಣ್ಯ ಇಲಾಖೆ ಮತ್ತು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಕಾಡಾನೆ ಇಲ್ಲವೇ ಚಿರತೆ ಕಾಣಿಸಿಕೊಂಡಾಗ ಮಾತ್ರ ಅವುಗಳನ್ನು ಓಡಿಸಿ ಇಲ್ಲವೇ ಸೆರೆಹಿಡಿದ ಬಳಿಕ ಪರಿಹಾರ ಒದಗಿಸುವ ಮಾತುಗಳು ಕೇಳಿ ಬರುತ್ತವೆ, ಆಮೇಲೆ ವಿಷಯ ಮರೆತು ಹೋಗುತ್ತದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಇದನ್ನೂ ಓದಿ:   ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಪುನಃ ಕಾಡಿಗಟ್ಟಲು ನಾಗರಹೊಳೆಯಿಂದ ಭೀಮ ಮತ್ತು ಅರ್ಜುನ ಬಂದಿದ್ದಾರೆ