ಮೈಸೂರು ಉದ್ಬೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಹಣ ಕೊಟ್ಟರಷ್ಟೇ ಚಿಕಿತ್ಸೆ’
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಿಂದ ಹಣ ವಸೂಲಿ. ಮೈಸೂರಿನ ಉದ್ಬೂರು ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವೈದ್ಯ. ಚಿಕಿತ್ಸೆ ಪಡೆಯಲು ಬಂದ ಪ್ರತಿಯೊಬ್ಬರಿಂದ ಹಣ ಪಡೆಯುವ ವೈದ್ಯ ಬಿ.ಜಿ ಕುಮಾರಸ್ವಾಮಿ.
ಮೈಸೂರು: ರಾಯಚೂರು ಜಿಲ್ಲೆ ಲಿಂಗಸಗೂರು ಆಸ್ಪತ್ರೆ ಸಿಬ್ಬಂದಿ ಸಹಜ ಹೆರಿಗೆಗೆ ಹಣ ವಸೂಲಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರು ತಾಲೂಕಿನ ಉದ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಕುಮಾರಸ್ವಾಮಿ ರೋಗಿಗಳ ಬಳಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ವೈದ್ಯ ಕುಮಾರಸ್ವಾಮಿ ಪ್ರತಿಯೊಬ್ಬ ರೋಗಿಯಿಂದಲೂ ಹಣ ಪಡೆಯುತ್ತಿದ್ದಾರೆ. ಡ್ರಿಪ್ಸ್ ಹಾಕಲು 200 ರೂ., ಜ್ವರ ಬಂದರೆ ತಪಾಸಣೆಗೆ 100 ರೂಪಾಯಿ. ಇಂಜೆಕ್ಷನ್ ಹಾಕಲು ರೋಗಿಗಳು 50 ರೂಪಾಯಿ ನೀಡುವುದು ಕಡ್ಡಾಯ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಡಾ.ಬಿ.ಜಿ.ಕುಮಾರಸ್ವಾಮಿ ಹಣ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಪಿಹೆಚ್ಸಿಯಲ್ಲಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ, ಔಷಧ ನೀಡದೆ ಪ್ರತಿದಿನ ರೋಗಿಗಳಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಉದ್ಬೂರು ಪಿಹೆಚ್ಸಿ ವೈದ್ಯ ಡಾ.ಕುಮಾರಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದ್ದು ಗ್ರಾಮಾಂತರ ಪ್ರದೇಶಕ್ಕೆ ನಿಷ್ಠಾವಂತ ವೈದ್ಯಾಧಿಕಾರಿ ನೇಮಕಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.