ಗೃಹಲಕ್ಷ್ಮೀ ಬಗ್ಗೆ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ಕಾಂಗ್ರೆಸ್​ನಿಂದ ಸಂಧಾನ ಯತ್ನ

Updated on: Dec 17, 2025 | 10:25 AM

ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆಯಲಿದೆ. ಫೆಬ್ರವರಿ-ಮಾರ್ಚ್ ತಿಂಗಳ 5,500 ಕೋಟಿ ರೂ. ಅನುದಾನದ ಬಗ್ಗೆ ಬಿಜೆಪಿ ಪ್ರಶ್ನಿಸಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿದೆ. ತಾಂತ್ರಿಕ ದೋಷಗಳನ್ನು ಸರಿಪಡಿಸುವುದಾಗಿ ಸರ್ಕಾರ ಹೇಳಿದೆ.

ಬೆಳಗಾವಿ, ಡಿಸೆಂಬರ್ 17: ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಮತ್ತು ವಿವಾದ ಮುಂದುವರಿದಿದೆ. ಯೋಜನೆಯಡಿ ಫಲಾನುಭವಿಗಳಿಗೆ ಹಣ ಸಮರ್ಪಕವಾಗಿ ತಲುಪಿಲ್ಲ ಎಂದು ವಿರೋಧ ಪಕ್ಷಗಳು, ವಿಶೇಷವಾಗಿ ಬಿಜೆಪಿ ಆರೋಪಿಸಿದೆ. ಈ ಕುರಿತು ವಿಧಾನಸಭೆಯಲ್ಲಿ ಉತ್ತರ ನೀಡುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಪ್ಪು ಮಾಹಿತಿ ನೀಡಿರುವ ಬಗ್ಗೆಯೂ ಕೋಲಾಹಲ ಜೋರಾಗಿದ್ದು, ಮುಖಭಂಗ ತಪ್ಪಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಇದೀಗ ಸಂಧಾನಕ್ಕೆ ಮುಂದಾಗಿದೆ. ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂದು ದಾಖಲೆಗಳ ಸಮೇತ ಆರೋಪಿಸಿದ್ದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ. ಈ ಎರಡು ತಿಂಗಳುಗಳ ಅವಧಿಯ ಸುಮಾರು ₹5,500 ಕೋಟಿಗೂ ಅಧಿಕ ಅನುದಾನ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಕಡೆಯಿಂದ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರು ಒಂದಷ್ಟು ತಾಂತ್ರಿಕ ದೋಷಗಳು ಇರುವುದನ್ನು ಒಪ್ಪಿಕೊಂಡಿದ್ದು, ಅವುಗಳನ್ನು ಆದಷ್ಟು ಬೇಗ ಸರಿಪಡಿಸುವುದಾಗಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಜಿಎಸ್ಟಿ ಪಾಲು ಲಭ್ಯವಾಗದಿರುವುದರಿಂದ ಹಣದ ಕೊರತೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಈ ವಿಷಯವು ಇಂದು ಸದನದಲ್ಲಿ ಮತ್ತಷ್ಟು ಚರ್ಚೆಗೆ ಬರುವ ಸಾಧ್ಯತೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ