ಜೈಲಿನಲ್ಲಿರುವ ಪ್ರಜ್ವಲ್‌ಗೆ ಫೋನ್ ಕೊಟ್ಟವರ್‍ಯಾರು?: ಕೆಪಿಎಸ್‌ಸಿ, ನೈಸ್ ಹಗರಣ ಎತ್ತಿದ್ದಕ್ಕೇ ಟಾರ್ಗೆಟ್ ಎಂದ ಕುಮಾರಸ್ವಾಮಿ

Edited By:

Updated on: Sep 15, 2026 | 1:44 PM

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಪ್ರಕರಣ ತಮ್ಮ ಕುಟುಂಬವನ್ನು ಗುರಿಯಾಗಿಸುವ ರಾಜಕೀಯ ಷಡ್ಯಂತ್ರವೆಂದು ಆರೋಪಿಸಿದ್ದಾರೆ. ಕೆಪಿಎಸ್‌ಸಿ, ನೈಸ್ ಹಗರಣಗಳನ್ನು ಎತ್ತಿದ ನಂತರ ಈ ಹೊಸ ಬೆಳವಣಿಗೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆಪಾದಿಸಿದ್ದಾರೆ.

ಹಾಸನ, ಸೆ.15: ಜೈಲಿನಲ್ಲಿ  ಪ್ರಜ್ವಲ್ ರೇವಣ್ಣ ಫೋನ್​​​ ಬಳಸಿರುವ ಬಗ್ಗೆ ರಾಜಕೀಯವಾಗಿ ಭಾರೀ ಚರ್ವೆಗೆ ಕಾರಣವಾಗಿದೆ. ಇನ್ನು ಎಫ್‌ಎಸ್‌ಎಲ್ ವರದಿಯಲ್ಲೂ ಮಹತ್ವದ ವಿಚಾರಗಳು ಪತ್ತೆಯಾಗಿದೆ, ಇದೀಗ ಈ ಬಗ್ಗೆ  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸ ಮುಗಿಸಿ ರಾಜ್ಯಕ್ಕೆ ಮರಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವಿಚಾರವನ್ನು ತಮ್ಮ ಕುಟುಂಬವನ್ನು ಗುರಿಯಾಗಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಮಾವಿನಕೆರೆಯಲ್ಲಿ ಈ ಹೇಳಿಕೆ ನೀಡಿದ ಕುಮಾರಸ್ವಾಮಿ, ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿರುವ ವ್ಯಕ್ತಿಗೆ ಈಗ ಫೋನ್ ಎಲ್ಲಿಂದ ಬಂತು, ಯಾರು ಕೊಟ್ಟರು ಎಂದು ಪ್ರಶ್ನಿಸಿದರು. ಜೈಲಿನೊಳಗಡೆ ಅಶ್ಲೀಲ ಚಿತ್ರಗಳು ಹೇಗೆ ಬಂದವು ಎಂಬ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದರು. ಪ್ರಕರಣದ ಸಮಯದ ಬಗ್ಗೆಯೂ ಕುಮಾರಸ್ವಾಮಿ ಪ್ರಶ್ನೆಗಳನ್ನು ಎತ್ತಿದರು. ಕೆಪಿಎಸ್‌ಸಿ ಹಗರಣ, ನೈಸ್ ಹಗಲು ದರೋಡೆ ಹಾಗೂ ಬಿಡದಿ ಭೂ ಹಗರಣಗಳಿಗೆ ಸಂಬಂಧಿಸಿದಂತೆ ತಾವು ಪ್ರಸ್ತಾಪಿಸಿದ ವಿಚಾರಗಳು ಬೆಳಕಿಗೆ ಬಂದ ನಂತರವೇ ಈ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಹೊಸದಾಗಿ ಸರಣಿಯಂತೆ ಬಿಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ದೇವೇಗೌಡರ ಕುಟುಂಬದವರ ಧ್ವನಿ ಅಡಗಿಸಲು ಈ ವಿಚಾರವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಮೌನಗೊಳಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಸರ್ವನಾಶ ಮಾಡುವ ಆದ್ಯತೆಯನ್ನು ಹೊಂದಿದ್ದಾರೆ ಎಂದು ಕುಮಾರಸ್ವಾಮಿ ನೇರವಾಗಿ ಆರೋಪಿಸಿದರು. 400 ಅತ್ಯಾಚಾರ ಪ್ರಕರಣಗಳ ಬಗ್ಗೆ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಎಷ್ಟು ಕುಟುಂಬಗಳ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿದೆ ಎಂದು ಪ್ರಶ್ನಿಸಿದರು. ತಮ್ಮ ಕುಟುಂಬದ ಸದಸ್ಯರೊಬ್ಬರಿಂದ ಅನ್ಯಾಯವಾಗಿದೆ ಎಂದು ಬಿಂಬಿಸುವ ಬದಲು, ಎಷ್ಟು ಕುಟುಂಬಗಳ ಹೆಣ್ಣುಮಕ್ಕಳ ಮರ್ಯಾದೆ ಕಾಪಾಡಿದ್ದೀರಿ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು. ಈ ಬೆಳವಣಿಗೆಗಳಿಗೆ ಹೆದರಿ ತಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನ್ಯಾಯ ಮತ್ತು ಸತ್ಯಕ್ಕೆ ತಲೆಬಾಗುವುದಾಗಿ ಹೇಳಿದ ಅವರು, “ನಾನಾಗಲಿ ಅಥವಾ ಬೇರೆಯವರಾಗಲಿ ತಪ್ಪು ಮಾಡಿದ್ದರೆ ತಲೆಬಾಗಲು ಸಿದ್ಧನಿದ್ದೇನೆ. ಆದರೆ, ನಿಮ್ಮಂತೆ ಎಲ್ಲವನ್ನೂ ದೋಚುವ ಕೆಲಸ ಮಾಡಿಲ್ಲ” ಎಂದು ಹೇಳಿದರು. ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಸಲಾಗುತ್ತಿರುವ ತೇಜೋವಧೆಯನ್ನು ಅವರು ಖಂಡಿಸಿದರು. ದೇವೇಗೌಡರು ತಮ್ಮ 75 ವರ್ಷಗಳ ರಾಜಕೀಯ ಜೀವನದಲ್ಲಿ ಅಕ್ರಮಗಳ ವಿರುದ್ಧವೇ ಹೋರಾಡಿದವರು ಎಂದು ನೆನಪಿಸಿಕೊಂಡರು. ಅವರ ಮಾರ್ಗದಲ್ಲಿ ತಾನು ಮುಂದುವರಿಯುವುದಾಗಿ, ತಮ್ಮ ಧ್ವನಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಜನರ ಧ್ವನಿಯನ್ನು ಅಡಗಿಸಲಾಗಿದೆ ಎಂದು ಅವರು ಪ್ರಶ್ನಿಸಿದರು. ವಿಧಾನಸಭೆಯಲ್ಲಿ ಚರ್ಚೆಯಾದ “ಹನಿಟ್ರ್ಯಾಪ್” ಪ್ರಕರಣವನ್ನು ಉಲ್ಲೇಖಿಸಿದ ಅವರು, 48 ಜನರ ವಿಚಾರದಲ್ಲಿ, ನ್ಯಾಯಾಧೀಶರು, ಹಲವಾರು ರಾಜಕಾರಣಿಗಳು, ಕೇಂದ್ರ ಮಂತ್ರಿಗಳು ಮತ್ತು ಕೇಂದ್ರ ನಾಯಕರ ಹೆಸರುಗಳನ್ನು ಒಳಗೊಂಡ ದಾಖಲೆಗಳು ಇರುವುದಾಗಿ ಆರೋಪಿಸಿದರು. ಆದರೆ ಆ ವಿಷಯವನ್ನು ಏಕೆ ನಿಲ್ಲಿಸಲಾಯಿತು ಮತ್ತು ಯಾರು ಅದನ್ನು ಸ್ಥಗಿತಗೊಳಿಸಿದರು ಎಂದು ಅವರು ಪ್ರಶ್ನಿಸಿದರು. ತಾವು ಎಲ್ಲಾ ಮಾಧ್ಯಮಗಳ ಬಗ್ಗೆ ದೋಷಾರೋಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಕಳೆದ ಮೂರು ವರ್ಷಗಳಿಂದ ಕೆಲವು ಮಾಧ್ಯಮಗಳು ತಮ್ಮ ಕುಟುಂಬದ ತೇಜೋವಧೆಗೆ ನಿರಂತರವಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ತಮ್ಮ ತಾಯಿ ಹಾಸಿಗೆ ಹಿಡಿದಿದ್ದರೂ, ಅವರ ಬಗ್ಗೆಯೂ ಅವಹೇಳನಕಾರಿ ಪದಗಳನ್ನು ಬಳಸಲಾಯಿತು ಎಂದು ಅವರು ನೋವು ವ್ಯಕ್ತಪಡಿಸಿದರು. ರಾಜ್ಯದ ಸಂಪತ್ತು ಉಳಿಸಲು ಮತ್ತು ಅಕ್ರಮಗಳನ್ನು ನಿಲ್ಲಿಸಲು ಯಾರಾದರೊಬ್ಬರು ಧ್ವನಿ ಎತ್ತಲೇಬೇಕು, ಅದಕ್ಕಾಗಿ ತಾವು ಸಿದ್ಧರಾಗಿ ನಿಂತಿರುವುದಾಗಿ ಕುಮಾರಸ್ವಾಮಿ ಹೇಳಿದರು. ತಮ್ಮನ್ನು ಸುಲಭವಾಗಿ ಸ್ತಬ್ಧಗೊಳಿಸಲು ಸಾಧ್ಯವಿಲ್ಲ ಮತ್ತು ಹೋರಾಟವನ್ನು ಮುಂದುವರಿಸುವುದಾಗಿ ಅವರು ಪುನರುಚ್ಚರಿಸಿದರು.

ಎಫ್‌ಎಸ್‌ಎಲ್ ವರದಿ ಬಹಿರಂಗ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಸಿಸಿಬಿ (CCB) ದಾಳಿ ವೇಳೆ ಪತ್ತೆಯಾಗಿದ್ದ ಮೊಬೈಲ್ ಮತ್ತು ಪೆನ್‌ಡ್ರೈವ್‌ನ ಎಫ್‌ಎಸ್‌ಎಲ್ ವರದಿ ಈಗ ಸಿಐಡಿ ಮತ್ತು ಪರಪ್ಪನ ಅಗ್ರಹಾರ ಪೊಲೀಸರ ಕೈಸೇರಿದೆ. ಪ್ರಜ್ವಲ್ ಬಳಸುತ್ತಿದ್ದ ಮೊಬೈಲ್‌ನಲ್ಲಿ ಬರೋಬ್ಬರಿ 173 ಫೈಲ್‌ಗಳು ಲಭ್ಯವಾಗಿವೆ. ಇದರಲ್ಲಿ 3 ಪ್ರಜ್ವಲ್‌ಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ಸೇರಿದಂತೆ ವೆಬ್ ಸರಣಿ, ಸಿನಿಮಾಗಳು ಪತ್ತೆಯಾಗಿವೆ. ಸ್ಯಾಂಡಿಸ್ಕ್ ಪೆನ್‌ಡ್ರೈವ್‌ನಲ್ಲಿ 100ಕ್ಕೂ ಹೆಚ್ಚು ಅಶ್ಲೀಲ ಹಾಗೂ ಇತರೆ ವೀಡಿಯೊಗಳು ಪತ್ತೆಯಾಗಿವೆ. ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಹಾಗೂ ರೌಡಿಶೀಟರ್ ತೌಸಿಫ್ ಎಂಬಾತ ಮೊಬೈಲ್ ತಂದು ಜೈಲು ವಾರ್ಡರ್‌ಗೆ ನೀಡಿದ್ದ. ಆ ಜೈಲು ವಾರ್ಡರ್ ಮೂಲಕವೇ ಪ್ರಜ್ವಲ್ ರೇವಣ್ಣ ಅವರ ಕೈಗೆ ಮೊಬೈಲ್ ತಲುಪಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 15, 2026 01:37 PM
Loading...
Unable to load recommendations.
Follow Us