ಹಾಸನಾಂಬೆ ದರ್ಶನೋತ್ಸವ: ಪೂಜಾ ಕೈಂಕರ್ಯಗಳ ಬಗ್ಗೆ ವಿವರಿಸಿದ ಪ್ರಧಾನ ಅರ್ಚಕರು
ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಾಲಯದ ವಾರ್ಷಿಕ ದರ್ಶನೋತ್ಸವ ಆರಂಭವಾಗಿದೆ. ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿಯ ಬಾಗಿಲು ತೆರೆದಿದ್ದು, ಪ್ರಧಾನ ಅರ್ಚಕ ನಾಗರಾಜ್ ಪೂಜಾ ಕೈಂಕರ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ. ನಾಳೆ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 10ರವರೆಗೆ ಭಕ್ತರಿಗೆ ನಿರಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಪೂಜೆಗಳು ನಡೆಯಲಿವೆ.
ಹಾಸನದ ಅಧಿದೇವತೆ, ನಾಡಿನ ಶಕ್ತಿ ದೇವತೆ ಶ್ರೀ ಹಾಸನಾಂಬೆ ದೇವಾಲಯದಲ್ಲಿ ವಾರ್ಷಿಕ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಸ್ತ್ರೋಕ್ತವಾಗಿ ತೆರೆಯಲಿದೆ. ಈ ಕುರಿತು ಟಿವಿ9 ಜೊತೆ ಮಾತನಾಡಿದ ದೇವಾಲಯದ ಪ್ರಧಾನ ಅರ್ಚಕ ಶ್ರೀ ನಾಗರಾಜ್ ಅವರು, “ಪ್ರತಿ ವರ್ಷದಂತೆ ಈ ಬಾರಿಯೂ ಸಾಂಪ್ರದಾಯಿಕ ರೀತಿಯಲ್ಲಿ ಪೂಜಾ ವಿಧಿವಿಧಾನಗಳು ನಡೆಯುತ್ತವೆ. ನಂತರ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆರೆಯುತ್ತದೆ. ಇಂದಿನ ದಿನ ಹಾಗೂ ದರ್ಶನೋತ್ಸವದ ಕೊನೆಯ ದಿನ ಸಾರ್ವಜನಿಕರಿಗೆ ದರ್ಶನವಿರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಗಳು ಮತ್ತು ದೇವಿಯ ಅಲಂಕಾರ ಪೂಜೆ ಮಾತ್ರ ನಡೆಯಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ನಾಳೆ, ಅಂದರೆ ಬೆಳಗ್ಗೆ 6 ಗಂಟೆಯಿಂದ ನವೆಂಬರ್ 10ರವರೆಗೆ ನಿರಂತರವಾಗಿ ಭಕ್ತರಿಗೆ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗುವುದು. ಭಕ್ತರು ಶ್ರದ್ಧಾ ಭಕ್ತಿಯಿಂದ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಲು ಪ್ರಧಾನ ಅರ್ಚಕರು ಮನವಿ ಮಾಡಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
