AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಹಾಸನಾಂಬೆ ದರ್ಶನಕ್ಕೆ ಪಾಸ್​​​ ನೀಡುವುದಿಲ್ಲ, ಹಲವು ವ್ಯವಸ್ಥೆಯಲ್ಲಿ ಬದಲಾವಣೆ

ಈ ಬಾರಿ ಹಾಸನಾಂಬೆ ದರ್ಶನಕ್ಕೆ ಪಾಸ್​​​ ನೀಡುವುದಿಲ್ಲ, ಹಲವು ವ್ಯವಸ್ಥೆಯಲ್ಲಿ ಬದಲಾವಣೆ

ಅಕ್ಷಯ್​ ಪಲ್ಲಮಜಲು​​
|

Updated on:Oct 09, 2025 | 11:40 AM

Share

ಹಾಸನಾಂಬೆ ದೇಗುಲವು ಅಕ್ಟೋಬರ್ 9 ರಿಂದ 23ರವರೆಗೆ, ಒಟ್ಟು 13 ದಿನಗಳ ಕಾಲ ಭಕ್ತರ ದರ್ಶನಕ್ಕೆ ತೆರೆದಿರುತ್ತದೆ. ಈ ವರ್ಷ 25 ಲಕ್ಷಕ್ಕೂ ಅಧಿಕ ಭಕ್ತರು ನಿರೀಕ್ಷಿತರಾಗಿದ್ದು, ಜಿಲ್ಲಾಡಳಿತವು ಸರತಿ ಸಾಲುಗಳು, ನೀರು, ಮಜ್ಜಿಗೆ ವ್ಯವಸ್ಥೆ ಮಾಡಿದೆ. ಗೊಂದಲ ತಪ್ಪಿಸಲು ವಿಐಪಿ ಪಾಸ್ ರದ್ದುಪಡಿಸಿದೆ.

ಹಾಸನ, ಅ.9: ಹಾಸನಾಂಬೆ (Hasanamba Jatre) ಇಂದಿನಿಂದ ಭಕ್ತರಿಗೆ ದರ್ಶನ ನೀಡಲಿದ್ದಾರೆ. ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಜಿಲ್ಲಾಡಳಿತ ಈಗಾಗಲೇ ಎಲ್ಲ ತಯಾರಿಯನ್ನು ಮಾಡಿಕೊಂಡಿದೆ. ಇಂದು (ಗುರುವಾರ, ಅಕ್ಟೋಬರ್ 9) ಅಧಿಕೃತವಾಗಿ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು. ಮೊದಲ ದಿನ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಈ ವರ್ಷ ಅಕ್ಟೋಬರ್ 9 ರಿಂದ ಅಕ್ಟೋಬರ್ 23 ರವರೆಗೆ, ಒಟ್ಟು 15 ದಿನಗಳ ಕಾಲ ಹಾಸನಾಂಬೆ ದೇಗುಲದ ಬಾಗಿಲು ತೆರೆದಿರುತ್ತದೆ. ಅದರಲ್ಲಿ, ಮೊದಲ ಮತ್ತು ಕೊನೆಯ ದಿನವನ್ನು ಹೊರತುಪಡಿಸಿ, ಉಳಿದ 13 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗಾಗಿ ಪ್ರತ್ಯೇಕ ಸರತಿ ಸಾಲುಗಳನ್ನು ನಿರ್ಮಿಸಲಾಗಿದೆ. ವಿಶೇಷವಾಗಿ, ನೇರ ದರ್ಶನ ಪಡೆಯಲು ಇಚ್ಛಿಸುವ ಭಕ್ತರಿಗೆ 1000 ರೂಪಾಯಿ ಹಾಗೂ 300 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಈ ಟಿಕೆಟ್‌ಗಳನ್ನು ದೇಗುಲದ ಸಮೀಪದ ಕೌಂಟರ್‌ಗಳಲ್ಲಿ ಮತ್ತು ಆನ್‌ಲೈನ್ ಮೂಲಕವೂ ಪಡೆದುಕೊಳ್ಳಬಹುದು. 1000 ರೂಪಾಯಿ ಟಿಕೆಟ್ ಪಡೆದ ಭಕ್ತರಿಗೆ ಪ್ರತ್ಯೇಕ ಸರತಿ ಸಾಲುಗಳನ್ನು ಮಾಡಲಾಗಿದೆ. ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಬರಲು ಸುಗಮ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 11 ರಿಂದ 12 ಕಿಲೋಮೀಟರ್ ಉದ್ದದ ಬ್ಯಾರಿಕೇಡ್‌ಗಳನ್ನು ಹಾಕಿ, ಸರತಿ ಸಾಲುಗಳಲ್ಲಿ ಭಕ್ತರು ಶಿಸ್ತುಬದ್ಧವಾಗಿ ಬರಲು ಅನುಕೂಲ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಸರತಿ ಸಾಲುಗಳ ಉದ್ದಕ್ಕೂ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಿ ನಿರಂತರ ನಿಗಾ ವಹಿಸಲಾಗಿದೆ. ಅಲ್ಲದೆ, ಹೊರಗೆ ನಿಂತ ಭಕ್ತರಿಗೆ ದೇವಿಯ ದರ್ಶನವನ್ನು ನೇರವಾಗಿ ನೋಡಲು ಟಿವಿ ಪರದೆಗಳನ್ನು ಹಾಕಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಮಜ್ಜಿಗೆ ವಿತರಣೆ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ಮುಂದೆ ಸಾಗಿ, ದೇಗುಲದ ಮುಖ್ಯ ದ್ವಾರದ ಬಳಿಯ ಕ್ಯೂ ಮೂಲಕ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಈ ವರ್ಷ ದರ್ಶನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ. ಹಿಂದೆ ಇದ್ದ ವಿಐಪಿ ಪಾಸ್, ವಿವಿಐಪಿ ಪಾಸ್ ಸೇರಿದಂತೆ ಎಲ್ಲಾ ರೀತಿಯ ಪಾಸ್‌ಗಳನ್ನು ರದ್ದು ಮಾಡಲಾಗಿದೆ. ಇದರಿಂದಾಗಿ ದರ್ಶನ ಪ್ರಕ್ರಿಯೆಯಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಸಾಧ್ಯವಾಗಿದೆ. ಕೇವಲ ದರ್ಶನಕ್ಕೆ 1000 ರೂಪಾಯಿ ಮತ್ತು 300 ರೂಪಾಯಿ ಟಿಕೆಟ್‌ಗಳನ್ನು ಹೊರತುಪಡಿಸಿ, ಗೋಲ್ಡ್ ಕಾರ್ಡ್ ವ್ಯವಸ್ಥೆಯನ್ನು ಮಾತ್ರ ಇರಲಿದೆ. ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಬೆಳಿಗ್ಗೆ 7:30 ರಿಂದ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗಣ್ಯರಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 12:30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಈ ನಿಗದಿತ ಸಮಯದ ನಂತರ ಬರುವ ಯಾರಿಗೂ ಶಿಷ್ಟಾಚಾರ ಪಾಲನೆ ಅಥವಾ ಗೋಲ್ಡ್ ಕಾರ್ಡ್ ಮೂಲಕ ಪ್ರವೇಶವಿರುವುದಿಲ್ಲ. ಎಲ್ಲರಿಗೂ ದರ್ಶನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಹೀಗಾಗಿ, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 09, 2025 11:39 AM