ಹಾಸನಾಂಬ ದರ್ಶನೋತ್ಸವ 2026: ಮಿಸ್ ಮಾಡದೇ ನೀವು ನೋಡಬೇಕಾದವುಗಳ ಬಗ್ಗೆ ಇಲ್ಲಿದೆ ಮಾಹಿತಿ
ಹಾಸನಾಂಬ ದರ್ಶನೋತ್ಸವ ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ನಡೆಯಲಿದೆ. ಭಕ್ತರಿಗಾಗಿ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಮಾಡಿದೆ. ದೇಗುಲದ ಆವರಣವನ್ನು ಪುಷ್ಪಗಳಿಂದ ಮತ್ತು ಕಲಾತ್ಮಕ ಮೂರ್ತಿಗಳಿಂದ ಅಲಂಕರಿಸಲಾಗಿದ್ದು, ನಟರಾಜ ಮತ್ತು ಸಪ್ತಮಾತೃಕೆಯರ ಪ್ರತಿಷ್ಠಾಪನೆಯೊಂದಿಗೆ ಭಕ್ತಿಭಾವದ ಲೋಕ ಸೃಷ್ಟಿಯಾಗಿದೆ. ಈ ಬಾರಿ ಹಾಸನಾಂಬೆಯ ಇತಿಹಾಸ ಮತ್ತು ಸಪ್ತಮಾತೃಕೆಯರ ಪ್ರಾಮುಖ್ಯತೆಯನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.
ಹಾಸನ, ಅಕ್ಟೋಬರ್ 29: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆಯ ದರ್ಶನೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಇಂದಿನಿಂದ (ಅಕ್ಟೋಬರ್ 29) ನವೆಂಬರ್ 11 ರವರೆಗೆ ಒಟ್ಟು 14 ದಿನಗಳ ಕಾಲ ದರ್ಶನೋತ್ಸವ ನಡೆಯಲಿದ್ದು, ಮೊದಲ ಮತ್ತು ಕೊನೆಯ ದಿನವನ್ನು ಹೊರತುಪಡಿಸಿ 12 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗಾಗಿ ಜಿಲ್ಲಾಡಳಿತ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.
ದೇಗುಲದ ಆವರಣದಲ್ಲಿ ದೇವಲೋಕವೇ ಧರೆಗಿಳಿದಂತೆ ಸುಂದರ ಅಲಂಕಾರಗಳನ್ನು ಮಾಡಲಾಗಿದೆ. ನಟರಾಜನ ಆಕರ್ಷಕ ವಿಗ್ರಹವನ್ನು ಸುತ್ತಲೂ ಗುಲಾಬಿ ಮತ್ತು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ. ಇದಲ್ಲದೆ, ಸಪ್ತಮಾತೃಕೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅವುಗಳ ಇತಿಹಾಸ ಮತ್ತು ಪುರಾಣವನ್ನು ಭಕ್ತರಿಗೆ ತಿಳಿಸುವ ವಿಶೇಷ ಪ್ರಯತ್ನ ಮಾಡಲಾಗಿದೆ. ಚಾಮುಂಡಿ, ಇಂದ್ರಾಣಿ, ವಾರಾಹಿ, ವೈಷ್ಣವಿ, ಕೌಮಾರಿ, ಮಹೇಶ್ವರಿ, ಬ್ರಾಹ್ಮಿ – ಈ ಸಪ್ತಮಾತೃಕೆಯರು ಹಾಸನದಲ್ಲಿ ನೆಲಸಿದ ಹಿನ್ನೆಲೆಯನ್ನು ಅನಾವರಣಗೊಳಿಸಲಾಗಿದೆ. ಇಂದು ಮಧ್ಯಾಹ್ನ ಗಣ್ಯರ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ತೆರೆಯಲಿದ್ದು, ನಾಳೆ ಬೆಳಿಗ್ಗೆ 6 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಸಿಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

