ಹಾಸನಾಂಬ ಭಕ್ತರಿಗೆ ಸಚಿವ ಶಿವಲಿಂಗೇಗೌಡ ಗುಡ್ ನ್ಯೂಸ್: ₹100 ರ ಬದಲಿಗೆ ₹60ಕ್ಕೆ ಸಿಗಲಿದೆ 2 ಲಡ್ಡು!
ಹಾಸನಾಂಬ ದರ್ಶನೋತ್ಸವದ ವೇಳೆ ಲಡ್ಡು ಪ್ರಸಾದದ ಹೆಚ್ಚಿನ ಬೆಲೆ ಕುರಿತು ಉಸ್ತುವಾರಿ ಸಚಿವ ಶಿವಲಿಂಗೇಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಕ್ತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎರಡು ಲಡ್ಡುಗಳನ್ನು 60 ರೂ.ಗೆ ಮಾರಾಟ ಮಾಡುವಂತೆ ಸೂಚಿಸಿದ್ದು, ಯಾವುದೇ ನಷ್ಟವಾದರೂ ಸರ್ಕಾರ ಭರಿಸುವುದಾಗಿ ತಿಳಿಸಿದ್ದಾರೆ. ಇದು ಭಕ್ತರ ಪರವಾದ ನಿರ್ಧಾರವಾಗಿದೆ.
ಹಾಸನ, ಅಕ್ಟೋಬರ್ 30: ಹಾಸನದ ಐತಿಹಾಸಿಕ ಹಾಸನಾಂಬ ದೇವಸ್ಥಾನದ ದರ್ಶನೋತ್ಸವ 2026 ರ ನಡುವೆ, ಉಸ್ತುವಾರಿ ಸಚಿವ ಶಿವಲಿಂಗೇಗೌಡರು ಲಡ್ಡು ಪ್ರಸಾದದ ಬೆಲೆ ನಿಗದಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಗುಲಕ್ಕೆ ಭೇಟಿ ನೀಡಿದ ಸಚಿವರು, ಪ್ರಸಾದದ ಮಾರಾಟ ದರ ಕೇಳಿ ಸಿಟ್ಟಿಗೆದ್ದರು. ಪ್ರಸ್ತುತ, ಭಕ್ತರಿಗೆ 100 ರೂಪಾಯಿಗೆ 2 ಲಡ್ಡುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ಪ್ರಶ್ನಿಸಿದ ಸಚಿವರು, ಸಾಮಾನ್ಯ ಭಕ್ತರಿಗೆ, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಲಡ್ಡುಗಳು ಕೈಗೆಟಕುವ ದರದಲ್ಲಿ ಸಿಗಬೇಕು ಎಂದು ಒತ್ತಿ ಹೇಳಿದರು. ‘ಸರ್ಕಾರ ಭಕ್ತರ ಪರವಾಗಿದೆ, ಲಾಭ ಗಳಿಸುವುದು ನಮ್ಮ ಉದ್ದೇಶವಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.
ಯಾವುದೇ ನಷ್ಟವಾದರೂ ಸರ್ಕಾರ ಭರಿಸಲು ಸಿದ್ಧವಿದೆ ಎಂದು ಘೋಷಿಸಿದ ಸಚಿವರು, ‘ಎರಡು ಲಡ್ಡುಗಳನ್ನು 60 ರೂಪಾಯಿಗೆ ಮಾರಾಟ ಮಾಡಿ. ನಷ್ಟವಾದರೆ ಸರ್ಕಾರದಿಂದ ಹಣ ತುಂಬಿಸುತ್ತೇನೆ’ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಭಕ್ತರ ದರ್ಶನ ವ್ಯವಸ್ಥೆ ಮತ್ತು ಅನುಕೂಲಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ದರ್ಶನಕ್ಕೆ ಬರುವ ಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವಂತೆ ನಿರ್ದೇಶಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

