ಸಲಗ ಚಿತ್ರತಂಡದೊಂದಿಗೆ ವಾರ್ಗಳಿಲ್ಲ, ವೈಮನಸ್ಸುಗಳಿಲ್ಲ; ಚಿತ್ರರಂಗದಲ್ಲಿರುವವರೆಲ್ಲ ಅಣ್ಣತಮ್ಮಂದಿರಂತೆ ಎಂದ ಸುದೀಪ್
‘ಸಲಗ’ ಚಿತ್ರಕ್ಕೆ ತಾವೇ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿರುವಾಗ ಅವರಿಗೆ ಕೆಟ್ಟದ್ದನ್ನು ಬಯಸುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಸುದೀಪ್ ಹೇಳಿದರು
ಅಕ್ಟೋಬರ್ 14 ರಂದು ಸುದೀಪ್ ಅವರು ‘ಕೋಟಿಗೊಬ್ಬ 3’ ಮತ್ತು ದುನಿಯಾ ವಿಜಯ್ ಅವರು ‘ಸಲಗ’ ಸಿನಿಮಾಗಳು ತೆರೆ ಕಾಣುತ್ತಿವೆ. ಎರಡೂ ದೊಡ್ಡ ಬಜೆಟ್ ಸಿನಿಮಾಗಳು ಮತ್ತು ಸುದೀಪ್ ಹಾಗೂ ವಿಜಯ್ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸುದೀಪ್ ಮತ್ತು ವಿಜಯ್ ನಡುವೆ ಸ್ಟಾರ್ ವಾರ್ ಶುರುವಿಟ್ಟುಕೊಂಡಿದೆ, ಸುದೀಪ್ ಸಲಗದ ಬಗ್ಗೆ ಕೆಟ್ಟದ್ದಾಗಿ ಮಾತಾಡಿದ್ದಾರೆ ಎಂಬ ವದಂತಿ ಹಬ್ಬಿತ್ತು, ಆದರೆ, ಸೋಮವಾರ ಬೆಂಗಳೂರಿನಲ್ಲಿ ನಡೆದ ‘ಕೋಟಿಗೊಬ್ಬ 3’ ಸುದ್ದಿ ಗೋಷ್ಟಿಯಲ್ಲಿ ಸುದೀಪ್ ಯಾವ ವಾರ್ ಗಳೂ ತಮ್ಮಲ್ಲಿ ಇಲ್ಲ, ‘ಸಲಗ’ ಚಿತ್ರಕ್ಕೆ ತಾವೇ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿರುವಾಗ ಅವರಿಗೆ ಕೆಟ್ಟದ್ದನ್ನು ಬಯಸುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದರು.
ಕೋವಿಡ್ ಸಂಕಷ್ಟ ದೂರವಾಗಿ ಚಿತ್ರಮಂದಿರಗಳು ಓಪನ್ ಆಗುತ್ತಿವೆ, ಚಿತ್ರದ ನಿರ್ಮಾಪಕರು ಚಿತ್ರಗಳನ್ನು ರಿಲೀಸ್ ಮಾಡುವ ಎದೆಗಾರಿಕೆ ಪ್ರದರ್ಶಿಸುತ್ತಿದ್ದಾರೆ. ಸ್ಥಬ್ಧಗೊಂಡಿದ್ದ ಚಿತ್ರರಂಗದ ಮತ್ತೊಮ್ಮೆ ಕ್ರಿಯಾಶೀಲಗೊಂಡಿದೆ. ಚಿತ್ರರಂಗಕ್ಕೆ ಸಂಬಂಧಪಟ್ಟವರೆಲ್ಲ ಅಣ್ಣ-ತಮ್ಮಂದಿರಂತೆ. ಪರಸ್ಪರ ಶುಭ ಹಾರೈಸಿಕೊಳ್ಳುತ್ತಾರೆ, ಕಷ್ಟ ಸುಖ ಹಂಚಿಕೊಳ್ಳುತ್ತಾರೆ. ಪರಿಸ್ಥಿತಿ ಹೀಗಿರುವಾಗ ಬೇರೊಬ್ಬರ ಕುರಿತು ಕೆಟ್ಟದ್ದಾಗಿ ಮಾತಾಡುವ, ಕೆಟ್ಟದ್ದನ್ನು ಬಯಸುವದಕ್ಕೆ ಯಾರಿಗೂ ಪುರುಸೊತ್ತಿಲ್ಲ ಎಂದು ಸುದೀಪ್ ಹೇಳಿದರು.
ಚಿತ್ರರಂಗ ಒಂದು ರೋಡ್ ಇದ್ದಂತೆ. ಆ ರಸ್ತೆ ಇದುವರೆಗೆ ಬಂದ್ ಆಗಿತ್ತು. ಈಗ ಓಪನ್ ಆಗಿದೆ, ರಸ್ತೆಯಲ್ಲಿ ಎಲ್ಲರೂ ಓಡಾಡುತ್ತಾರೆ. ಒಬ್ಬನ ಹತ್ತಿರ ಯಾವುದೋ ಐಷಾರಾಮಿ ಕಾರು ಇದೆ ಅಂದಾಕ್ಷಣ ರಸ್ತೆ ಅವನದ್ದಾಗುವುದಿಲ್ಲ. ಈ ರಸ್ತೆಯಲ್ಲಿ ಕಾರುಗಳು ಓಡಾಡುತ್ತವೆ, ಸೈಕಲ್ಗಳು ಓಡಾಡುತ್ತವೆ. ರಸ್ತೆ ಯಾರೋ ಒಬ್ಬನಿಗೆ ಸೇರಿದ ಸೊತ್ತಲ್ಲ. ಇಲ್ಲಿ ಎಲ್ಲರೂ ಒಂದು ಎಂದ ಸುದೀಪ್ ಹೇಳಿದರು.
ಇದನ್ನೂ ಓದಿ: Viral Video: ಮನೆಯ ಮಾಲೀಕ ತಿಂಡಿ ತಿನ್ನಿಸಿದರೆ ಮಾತ್ರ ತಿನ್ನುತ್ತೇನೆ ಎಂದು ಹಠ ಹಿಡಿದ ಮುದ್ದಾದ ಬೆಕ್ಕಿನ ಮರಿ ವಿಡಿಯೋ ವೈರಲ್