ಕಾಫಿನಾಡಿನಲ್ಲಿ ನಿಲ್ಲದ ಮಳೆ, ಸಾಮಾನ್ಯ ಜನಜೀವನ ಅಸ್ತವ್ಯಸ್ತ, ಕಾಫಿ ಬೆಳೆಗಾರರಲ್ಲಿ ಆತಂಕ
ಚಿಕ್ಕಮಗಳೂರು ನಗರ, ಮೂಡಿಗೆರೆ, ಎನ್ ಆರ್ ಪುರ, ಕೊಪ್ಪ ಮೊದಲಾದ ಕಡೆಗಳಲ್ಲಿ ಧೋ ಅಂತ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರವಂತೂ ದ್ವೀಪವಾಗಿ ಮಾರ್ಪಟ್ಟಿದೆ.
ಕಾಫಿನಾಡು ಚಿಕ್ಕಮಗಳೂರು ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಸಿಕ್ಕು ಜಿಲ್ಲೆಯಾದ್ಯಂತ ಸಾಮಾನ್ಯ ಜನಜೀವನದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಮಲೆನಾಡು ಪ್ರದೇಶಗಳಲ್ಲಿ ಮಳೆ ಸುರಿಯೋದು ಹೊಸ ವಿಷಯವೇನಲ್ಲ. ಮಳೆ ಮತ್ತು ಮಲೆನಾಡಿಗೆ ಆವಿನಾಭಾವ ಸಂಬಂಧ. ಆದರೆ, ಚಿಕ್ಕಮಗಳೂರಿನಲ್ಲಿ ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆ ಜನರ ತಲೆ ಚಿಟ್ಟು ಹಿಡಿಯುವಂತೆ ಮಾಡಿದೆ. ಮನೆಗಳಿಂದ ಹೊರಬಿದ್ದು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳುವುದೂ ಜನರಿಗೆ ಸಾಧ್ಯವಾಗುತ್ತಿಲ್ಲ.
ಚಿಕ್ಕಮಗಳೂರು ನಗರ, ಮೂಡಿಗೆರೆ, ಎನ್ ಆರ್ ಪುರ, ಕೊಪ್ಪ ಮೊದಲಾದ ಕಡೆಗಳಲ್ಲಿ ಧೋ ಅಂತ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರವಂತೂ ದ್ವೀಪವಾಗಿ ಮಾರ್ಪಟ್ಟಿದೆ. ಇಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ನೀರು ಹರಿದಿದೆ. ಚಾರ್ಮಡಿ, ಜಾವಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆನೀರು ನದಿಯಂತೆ ಹರಿಯುತ್ತಿದೆ. ರಸ್ತೆಗಳು ಹೊಂಡಗಳಾಗಿ ಮಾರ್ಪಟ್ಟಿರುವುದರಿಂದ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಜನರ ಆಕ್ರೋಷಕ್ಕೆ ತುತ್ತಾಗಿದೆ.
ವಿದ್ಯುತ್ ಕಂಬ ಮತ್ತು ಮರಗಳು ಹುಟ್ಟಿರುವ ಉರುಳಿ ಬಿದ್ದಿರುವ ಘಟನೆಗಳೂ ಅಲ್ಲಲ್ಲಿ ಸಂಭವಿಸಿವೆ. ಕಾಫಿ ತೋಟಗಳ ಮಾಲೀಕರು ಸಹ ಮಳೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಸತತವಾಗಿ ಸುರಿಯುತ್ತಿದ್ದರೆ ಕಾಫಿ ಬೀಜಗಳು ಉದುರುವ ಸಾಧ್ಯತೆಯಿರುತ್ತದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮಳೆ ಇನ್ನೂ ಎರಡು ದಿನಗಳ ಕಾಲ ಮಳೆ ಬೀಳಲಿದೆ. ಚಿಕ್ಕಮಗಳೂರಿನ ಜನ ಇನ್ನೆಷ್ಟು ಬೇಸತ್ತುಕೊಳ್ಳಲಿದ್ದಾರೋ?