ನಂದಿ ಮೇಲೆ ಸವಾರಿ ಹೊರಟಿರುವ ಶಿವನ ವಿಗ್ರಹದ ದೇವಸ್ಥಾನ ಇರೋದು ಕೇವಲ ಲಕ್ಷ್ಮೇಶ್ವರನಲ್ಲಿ ಮಾತ್ರ!
ಮಾಘ ಮಾಸದ ಬಹುಳ ನಕ್ಷತ್ರದಂದು ಸೂರ್ಯೋದಯದ ಪ್ರಥಮ ಕಿರಣ ಗರ್ಭಗುಡಿಯಲ್ಲಿರುವ ಸೋಮೇಶ್ವರನ ವಿಗ್ರಹವನ್ನು ಸ್ಪರ್ಶಿಸುವುದು ಈ ದೇವಸ್ಥಾನದ ಮತ್ತೊಂದು ವಿಶೇಷ.
ಶಿವಾಲಯ, ಈಶ್ವರನ ದೇವಸ್ಥಾನ, ಭೋಲೆನಾಥ ಮಂದಿರ-ಶಿವನ ಯಾವುದೇ ಗುಡಿಗೆ ಹೋದರೂ ನಮಗೆ ಕಾಣಸಿಗೋದು ಶಿವಲಿಂಗ ಇಲ್ಲವೇ ಶಿವನ ವಿಗ್ರಹ. ಆದರೆ, ಶಿವ ತನ್ನ ಪತ್ನಿ ಪಾರ್ವತಿ ಜೊತೆ ನಂದಿ ಮೇಲೆ ಸವಾರಿ ಹೊರಟಿರುವ ದೃಶ್ಯ ಅಥವಾ ವಿಗ್ರಹವನ್ನು ನೀವು ಎಲ್ಲಾದರೂ ನೋಡಿದ್ದೀರಾ? ಬಹಳ ಅಪರೂಪ. ಅಷ್ಟ್ಯಾಕೆ, ಇಡೀ ದಕ್ಷಿಣ ಭಾರತದಲ್ಲಿ ಅಂಥ ವಿಗ್ರಹವಿರುವ ಇರೋ ದೇವಸ್ಥಾನ ಕೇವಲ ಒಂದು ಮಾತ್ರ. ಅದೆಲ್ಲಿ ಗೊತ್ತಾ? ಗದಗ ಜಿಲ್ಲೆಯ ಲಕ್ಷ್ಮೇಶ್ವರನಲ್ಲಿ. ಹೌದು, ಲಕ್ಷ್ಮೇಶ್ವರದ ಸೋಮೇಶ್ವರದಲ್ಲಿ ನೀವು ಈಶ್ವರ ಮತ್ತು ಪಾರ್ವತಿ ಜೊತೆಯಾಗಿ ನಂದಿಯ ಮೇಲೆ ಆಸೀನರಾಗಿರುವುದನ್ನು ನೋಡಬಹುದು. ಈ ದೇವಸ್ಥಾನ ಕೇವಲ ಅಪರೂಪದ ವಿಗ್ರಹಕ್ಕಾಗಿ ಮಾತ್ರವಲ್ಲದೆ, ಅದರ ಹೊರಭಾಗದ ಶಿಲ್ಪಕಲೆಗೂ ಪ್ರಸಿದ್ಧಿಯಾಗಿದೆ. ದೇವಸ್ಥಾನವು ಹೊಯ್ಸಳರ ಕಾಲದಲ್ಲಿ ಕಟ್ಟಲ್ಪಟ್ಟಿರುವುದರಿಂದ ನಕ್ಷತ್ರಾಕಾರದಲ್ಲಿದೆ.
ದೇವಸ್ಥಾನದ ಹೊರಭಾಗದಲ್ಲಿ ಭೈರವಿ, ಶಿವ, ವಿಷ್ಣು, ಶಕ್ತಿ, ಗಣೇಶ, ವೀರಭದ್ರ, ವೇಣುಗೋಪಾಲ ಮತ್ತು ಯಕ್ಷ-ಯಕ್ಷಿಣಿಯರ ಶಿಲ್ಪಗಳನ್ನು ಕೆತ್ತಲಾಗಿದೆ. ಹಾಗೆಯೇ, ಇಲ್ಲಿ ಚಂದ್ರನನ್ನು ನುಂಗುತ್ತಿರುವ ಸರ್ಪದ ಶಿಲ್ಪವನ್ನು ಸಹ ಕೆತ್ತಲಾಗಿದ್ದು, ಸರ್ಪವು ಚಂದ್ರನನ್ನು ಸಂಪೂರ್ಣವಾಗಿ ನುಂಗಿದ ದಿನ ಪ್ರಳಯವಾಗುತ್ತದೆ ಎಂದು ಹೇಳಲಾಗುತ್ತದೆ.
ಮಾಘ ಮಾಸದ ಬಹುಳ ನಕ್ಷತ್ರದಂದು ಸೂರ್ಯೋದಯದ ಪ್ರಥಮ ಕಿರಣ ಗರ್ಭಗುಡಿಯಲ್ಲಿರುವ ಸೋಮೇಶ್ವರನ ವಿಗ್ರಹವನ್ನು ಸ್ಪರ್ಶಿಸುವುದು ಈ ದೇವಸ್ಥಾನದ ಮತ್ತೊಂದು ವಿಶೇಷ.
ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಮತ್ತು ಸಂಸ್ಥೆಯ ಸಹ-ಸಂಸ್ಥಾಪಕರಾಗಿರುವ ನಾರಾಯಣ ಮೂರ್ತಿ ಅವರ ಧರ್ಮಪತ್ನಿ ಸುಧಾ ಮೂರ್ತಿ ಅವರು ಇದೇ ಭಾಗದವರಾಗಿದ್ದು (ಅವರು ಹುಟ್ಟಿದ್ದು ಶಿಗ್ಗಾಂವ್) ಸುಮಾರು 4 ವರ್ಷಗಳ ಹಿಂದೆ ರೂ. 5 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದಾರೆ ಮತ್ತು ಪ್ರತಿವರ್ಷ ಇಲ್ಲಿ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಖರ್ಚು ವೆಚ್ಚಗಳನ್ನು ಅವರೇ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: Viral Video: ಆಸ್ಪತ್ರೆಯಲ್ಲಿ ತನ್ನ ನೆಚ್ಚಿನ ಹಾಡು ಕೇಳಿ ನೃತ್ಯ ಮಾಡಿದ ಪುಟ್ಟ ಮಗು; ನೆಟ್ಟಿಗರ ಹೃದಯ ಗೆದ್ದ ವಿಡಿಯೋ ನೋಡಿ