ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ, ಬಾಂಗ್ಲಾದೇಶದಿಂದ ಬಂದವರ ಪೋಷಣೆ: ಕುಮಾರಸ್ವಾಮಿ ಗಂಭೀರ ಆರೋಪ

Updated on: Jul 02, 2026 | 5:39 PM

ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಪ್ರಭಾವ ಬೀರಿ ಕಳ್ಳ ಮತದಾರರನ್ನು ಸೃಷ್ಟಿಸುತ್ತಿದೆ. ಬಾಂಗ್ಲಾದೇಶದಿಂದ ಬಂದವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆಪಾದಿಸಿದ್ದಾರೆ. ರಾಮನಗರದಲ್ಲಿ ಬಿಎಲ್​ಓಗಳು ಮನೆ ಮನೆಗೆ ಹೋಗದೆ ಚೌಲ್ಟ್ರಿಗಳಲ್ಲಿ ಪ್ರಕ್ರಿಯೆ ನಡೆಸುತ್ತಿದ್ದು, ತಕ್ಷಣ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.

ಬೆಂಗಳೂರು, ಜುಲೈ 2: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್​ಐಆರ್​ ಪ್ರಕ್ರಿಯೆ ಬಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಗುರುವಾರ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ​ ಚುನಾವಣಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅಕ್ರಮಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ಅವರು ನೇರ ಆರೋಪ ಮಾಡಿದ್ದಾರೆ. ಬಾಂಗ್ಲಾದೇಶದಿಂದ ಬಂದವರನ್ನು ಪೋಷಿಸಿ, ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ರಾಮನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಂತಹ ಅಕ್ರಮ ಮತದಾರರಿದ್ದು, ಕಳ್ಳ ಮತದಾರರನ್ನು ಅರ್ಹರನ್ನಾಗಿ ಪರಿವರ್ತಿಸಲು ಯತ್ನಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್​ಓಗಳು) ಮನೆ ಮನೆಗೆ ಹೋಗಿ ಪರಿಶೀಲನೆ ನಡೆಸುವ ಬದಲು, ಚೌಲ್ಟ್ರಿಗಳಲ್ಲಿ ಜನರನ್ನು ಕೂರಿಸಿ ಎಸ್​ಐಆರ್​ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ರಾಮನಗರ ಮತ್ತು ಚನ್ನಪಟ್ಟಣ ಭಾಗದಲ್ಲಿ 8 ರಿಂದ 10 ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶ ಮೂಲದ ನಿವಾಸಿಗಳನ್ನು ರಕ್ಷಿಸಲಾಗಿದ್ದು, ಫೇಕ್ ಐಡಿಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಈ ಎಲ್ಲಾ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗ ಗಮನಹರಿಸಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 02, 2026 05:28 PM
Follow Us