ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಪೇಚಿಗೆ ಸಿಲುಕಿಸಿದರು!
ಮೃಗೀಯ ಮನಸ್ಥಿತಿ ಇರುವ ಜನಗಳ ನಡುವೆ ಹೆಣ್ಣುಮಕ್ಕಳು ಸುರಕ್ಷಿತರಲ್ಲ ಎಂದು ಅವರು ಹೇಳಿದಾಗ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕಿಸುವುದು ಬೇಡ ಅಂದುಕೊಳ್ಳುವ ಸಿದ್ದರಾಮಯ್ಯನವರು ಸಚಿವರ ಮಾತನ್ನು ತುಂಡರಿಸಿ ತಾವು ಮಾತಾಡಲಾರಂಭಿಸುತ್ತಾರೆ.
ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರು (Siddaramaiah) ಉತ್ತಮ ಸಂಸದೀಯ ಪಟುವೂ ಹೌದು (good Parliamentarian). ಸದನದ ಕಲಾಪ ನಡೆಯುವಾಗ ಅವರು ಮಾತಾಡಲು ಎದ್ದು ನಿಂತರೆ ಆಡಳಿತ ಪಕ್ಷದ ಸದಸ್ಯರಾಗಿರಬಹುದು ಇಲ್ಲವೇ ಸಚಿವರಾಗಿರಬಹುದು-ಅಳುಕೋದು ನಿಜ. ಯಾಕೆಂದರೆ ಸಿದ್ದರಾಮಯ್ಯ ಯಾವುದೇ ವಿಷಯ ಪ್ರಸ್ತಾಪಿಸಿದರೂ ಅದಕ್ಕೆ ಪೂರಕವಾದ ದಾಖಲೆಯನ್ನಿಟ್ಟುಕೊಂಡು ಮಾತಾಡುತ್ತಾರೆ. ಗುರುವಾರ ಸದನದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯ ಮತ್ತು ಪೊಲೀಸರ ವೈಫಲ್ಯದ ವಿಷಯ ಚರ್ಚೆಗೆ ಬಂದಾಗ ಸಿದ್ದರಾಮಯ್ಯನವರು ಸರ್ಕಾರಕ್ಕೆ ಕೆಲವು ಸಂದಿಗ್ಧ ಪ್ರಶ್ನೆಗಳನ್ನು ಕೇಳಿ ಪೇಚಿಗೆ ಸಿಲುಕಿಸುತ್ತಿದ್ದರು. ಅವರು ಪ್ರಶ್ನೆಗಳಿಗೆ ಉತ್ತರಿಸಲು ಎದ್ದು ನಿಂತ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಪೆದ್ದುಪೆದ್ದಾಗಿ ಮಾತಾಡಿ ಖುದ್ದು ತಾವೇ ತಮ್ಮ ಸರ್ಕಾರವನ್ನು ಇಕ್ಕಟ್ಟಿಗೆ ದೂಡಿದರು.
ದೇಶ ರಾಮರಾಜ್ಯವಾಗಬೇಕು ಅನ್ನೋದು ಗಾಂಧೀಜಿಯವರ ಆಶಯವಾಗಿತ್ತು ಆದರೆ ಅದು ಕಾಂಗ್ರೆಸ್ ಅಧಿಕಾರವಧಿಯಲ್ಲೂ ಆಗಲಿಲ್ಲ, ನಮ್ಮ ಅವಧಿಯಲ್ಲೂ ಆಗಲಿಲ್ಲ ಎಂದು ಮಾತು ಆರಂಭಿಸುವ ಗೃಹ ಸಚಿವರು ಮಹಿಳೆಯರು ಯಾವ ದೇಶದಲ್ಲೂ ಸುರಕ್ಷಿತವಾಗಿಲ್ಲ ಅನ್ನುತ್ತಾರೆ. ಮಾತಿನ ಭರದಲ್ಲಿ ಅವರು ಯಾವ ದೇಶದಲ್ಲಿ ಮಹಿಳೆ ರಾತ್ರಿ 12 ಗಂಟೆಗೆ ಸುರಕ್ಷಿತವಾಗಿ ಕಾಡಿಗೆ ಹೋದಾಳು, ನೀವೇ ಹೇಳಿ ಅಂತ ಅವರು ಹೇಳಿದಾಗ ಸಿದ್ದರಾಮಯ್ಯ ಕೂಡ ಒಂದು ಕ್ಷಣ ಕಕ್ಕಾಬಿಕ್ಕಿಯಾಗುತ್ತಾರೆ.
ರಾತ್ರಿ 12 ಗಂಟೆಗೆ ಮಹಿಳೆ ಯಾಕೆ ಕಾಡಿಗೆ ಹೋಗುತ್ತಾಳೆ ಮಾರಾಯ್ರೇ? ಸಚಿವರು ಏನನ್ನೋ ಹೇಳುವ ಪ್ರಯತ್ನದಲ್ಲಿ ಈ ಮಾತನ್ನು ಆಡಿಬಿಡುತ್ತಾರೆ.
ಮೃಗೀಯ ಮನಸ್ಥಿತಿ ಇರುವ ಜನಗಳ ನಡುವೆ ಹೆಣ್ಣುಮಕ್ಕಳು ಸುರಕ್ಷಿತರಲ್ಲ ಎಂದು ಅವರು ಹೇಳಿದಾಗ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಕ್ಕಿಸುವುದು ಬೇಡ ಅಂದುಕೊಳ್ಳುವ ಸಿದ್ದರಾಮಯ್ಯನವರು ಸಚಿವರ ಮಾತನ್ನು ತುಂಡರಿಸಿ ತಾವು ಮಾತಾಡಲಾರಂಭಿಸುತ್ತಾರೆ.
ನಮ್ಮ ಅಧಿಕಾರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿಲ್ಲ ಅಂತ ನಾನು ಹೇಳುವುದಿಲ್ಲ. ಆಗಲೂ ನಡೆದಿವೆ. ಅದರೆ ನೀವು ಗೃಹ ಸಚಿವರಾಗಿರುವುದು ಜನರಿಗೆ ಮತ್ತು ಮಹಿಳೆಯರಿಗೆ ರಕ್ಷಣೆ ಕೊಡುವುದಕ್ಕೋಸ್ಕರ. ಈ ಹಿನ್ನೆಲೆಯಲ್ಲಿ ನೀವು ನೀಡಿದ ಹೇಳಿಕೆ ಬೇಜವಾಬ್ದಾರಿಯುತವಾದದ್ದು, ಎಂದು ಸಿದ್ದರಾಮಯ್ಯ ಹೇಳುತ್ತಾರೆ.
ಇದನ್ನೂ ಓದಿ: ದೇವಾಲಯ ವ್ಯಾಪ್ತಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರ: ಸದನದಲ್ಲಿ ಚರ್ಚೆ ಜೋರು; ಏನೇನಾಯ್ತು?