ನಿಮ್ಮ ಪೊಲೀಸರು ಲಂಚ ತೆಗೆದುಕೊಂಡು ನಾಯಿಗಳಂತೆ ಬಿದ್ದಿದ್ದಾರೆ ಅಂತ ಜ್ಞಾನೇಂದ್ರ ಒಬ್ಬ ಹಿರಿಯ ಅಧಿಕಾರಿಗೆ ಬೈದಿದ್ದರು: ಸಿದ್ದರಾಮಯ್ಯ
ಅದಕ್ಕೆ ಸಿದ್ದರಾಮಯ್ಯನವರು, ಶಿವಮೊಗ್ಗನಲ್ಲೋ, ಚಿಕ್ಕಮಗಳೂರಿನಲ್ಲೋ ಅನ್ನುತ್ತಾ ಜ್ಞಾನೇಂದ್ರ ಅವರ ಕಡೆ ತಿರುಗಿ, ‘ಎಲ್ರೀ, ನೀವು ಹಾಗೆ ಬೈದಿದ್ದು?’ ಎಂದು ಅವರನ್ನೇ ಕೇಳಿದಾಗ ಇಡೀ ಸದನ ನಗೆಗಡಲಲ್ಲಿ ಮುಳುಗುತ್ತದೆ.
ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಗುರುವಾರ ಬೆಳಗ್ಗೆ ಎದ್ದ ಗಳಿಗೆ ಸರಿ ಇರಲಿಲ ಅನಿಸುತ್ತೆ. ಸದನದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತಮ್ಮನ್ನಿಂದು ಗೋಳು ಹೊಯ್ದುಕೊಳ್ಳಲಿದ್ದಾರೆ ಅಂತ ಅವರು ಸದನಕ್ಕೆ ಆಗಮಿಸಿದಾಗ ಅಂದುಕೊಂಡಿರಲಿಕ್ಕಿಲ್ಲ. ಪೊಲೀಸ್ ಇಲಾಖೆಯ (police department) ಕಾರ್ಯ ವೈಖರಿಯ ಬಗ್ಗೆ ಪ್ರಸ್ತಾಪ ಬಂದಾಗ ಜ್ಞಾನೇಂದ್ರ ಅವರು ಡಿಸೆಂಬರ್ 4, 2021 ರಂದು ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗೆ ಫೋನಲ್ಲಿ ಜರಿದ ವಿಷಯದ ಬಗ್ಗೆ ಮಾತಾಡುತ್ತಾ, ‘ನೀವು ಬೈದಿದ್ದು ನಿಜ ತಾನೆ,’ ಅಂತ ಕೇಳುತ್ತಾರೆ. ಜ್ಞಾನೇಂದ್ರ ಮತ್ತೊಮ್ಮೆ ಪೇಚಿಗೆ ಸಿಕ್ಕಿಕೊಳ್ಳುತ್ತಾರೆ. ಅವರು ಹೌದೆನ್ನುವ ಹಾಗೆ ನಿಧಾನಕ್ಕೆ ಕಂಡೂ ಕಾಣದಂತೆ ತಲೆ ಅಲ್ಲಾಡಿಸಿದಾಗ ಸಿದ್ದರಾಮಯ್ಯ ಸಚಿವರಾಡಿದ ಮಾತನ್ನು ಸದನಕ್ಕೆ ತಿಳಿಸುತ್ತಾರೆ. ಅವತ್ತು ಜ್ಞಾನೇಂದ್ರ ಅವರು ಒಬ್ಬ ಪೊಲೀಸ್ ಅಧಿಕಾರಿಗೆ, ‘ನಿಮ್ಮ ಪೋಲಿಸರೆಲ್ಲ ಲಂಚ ತಿಂದ್ಕೊಂಡು ನಾಯಿಗಳ ಥರ ಬಿದ್ದಿದ್ದಾರೆ,’ ಅಂತ ಫೋನಲ್ಲಿ ಹೇಳಿದ್ದರಂತೆ.
ಸಿದ್ದರಾಮಯ್ಯವರು ಹಾಗೆ ಹೇಳುವಾಗ ಅವರ ಪಕ್ಷದ ಸದಸ್ಯರೊಬ್ಬರು ಶಿವಮೊಗ್ಗನಲ್ಲಿ ಹೇಳಿದ್ದು ಅನ್ನುತ್ತಾರೆ. ಅದಕ್ಕೆ ಸಿದ್ದರಾಮಯ್ಯನವರು, ಶಿವಮೊಗ್ಗನಲ್ಲೋ, ಚಿಕ್ಕಮಗಳೂರಿನಲ್ಲೋ ಅನ್ನುತ್ತಾ ಜ್ಞಾನೇಂದ್ರ ಅವರ ಕಡೆ ತಿರುಗಿ, ‘ಎಲ್ರೀ, ನೀವು ಹಾಗೆ ಬೈದಿದ್ದು?’ ಎಂದು ಅವರನ್ನೇ ಕೇಳಿದಾಗ ಇಡೀ ಸದನ ನಗೆಗಡಲಲ್ಲಿ ಮುಳುಗುತ್ತದೆ.
ಅಮೇಲೆ ಸಿದ್ದರಾಮಯ್ಯನವರು ಜ್ಞಾನೇಂದ್ರ ನೀಡಿದ ಸಮಜಾಯಿಷಿಯ ಪೇಪರ್ ಕಟ್ಟಿಂಗ್ ಸದನದಲ್ಲಿ ಓದಿ ಹೇಳಿ, ‘ಇದೆಲ್ಲ ಸತ್ಯ ಅಂತ ಒಪ್ಕೊಳ್ತೀರಿ ತಾನೆ,’ ಅಂತ ಸಚಿವರನ್ನು ಕೇಳುತ್ತಾರೆ. ಸಿದ್ದರಾಮಯ್ಯನವರ ದಾಳಿಯಿಂದ ಸ್ವಲ್ಪ ಹೊತ್ತು ನಿಶ್ಚೇಷ್ಟಿತರಾಗಿದ್ದ ಜ್ಞಾನೇಂದ್ರ ಅವರು ಸಾವರಿಸಿಕೊಂಡು, ‘ಅವರೆಲ್ಲ ನನ್ನ ಕಾಲದಲ್ಲಿ ನಿಯುಕ್ತಿಗೊಂಡವರಲ್ಲ,’ ಎಂದು ಹೇಳುತ್ತಾರೆ. ಅದಕ್ಕೆ ಸಿದ್ದರಾಮಯ್ಯ ಯಾರ ಕಾಲದಲ್ಲಿ ನೇಮಕಗೊಂಡರೇನು, ಕುದುರೆ ಹತ್ತಿ ಸವಾರಿ ಮಾಡುತ್ತಿರುವವರು ನೀವು, ಲಗಾಮು ನಿಮ್ಮ ಕೈಯಲ್ಲಿರುತ್ತದೆ ಎಂದರು.
ಆಗ ಒಬ್ಬ ಸದಸ್ಯರು ಜೋರಾಗಿ, ‘ಕೊಟ್ಟ ಕುದರೆಯನ್ನು ಏರಿದವನು ಶುರನೂ ಅಲ್ಲ ಧೀರನೂ ಅಲ್ಲ ಅಂತ ಹೇಳಿದಾಗ ಸಿದ್ದರಾಮಯ್ಯ, ‘ಆಯ್ತಪ್ಪಾ ಇದು ಹಳೆ ಕುದುರೆ, ಇದರ ಕಾನೂನು ಸುವ್ಯವಸ್ಥೆ ಸರಿ ಮಾಡಲು ನಮಗೆ ಸಾಧ್ಯವಾಗಲ್ಲ ಅಂತ ತಪ್ಪು ಒಪ್ಪಿಕೊಳ್ಳಿ,’ ಅನ್ನುತ್ತಾರೆ.