ಹುಬ್ಬಳ್ಳಿ-ಧಾರವಾಡದಲ್ಲಿ ಅನುಮಾನ ಬಂದವರಿಗೆ ಡ್ರಗ್ಸ್ ಟೆಸ್ಟ್; ನೂರಕ್ಕೂ ಹೆಚ್ಚು ಯುವಕರ ಟೆಸ್ಟ್ ಪಾಸಿಟಿವ್
ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಸೇವನೆ ಮತ್ತು ಮಾರಾಟವನ್ನು ನಿಯಂತ್ರಿಸಲು ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಡ್ರಗ್ಸ್ ಸೇವನೆಯ ಶಂಕೆ ಇರುವ ನೂರಾರು ಯುವಕರನ್ನು ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಪರೀಕ್ಷೆಯಲ್ಲಿ ಅನೇಕರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಪೊಲೀಸರು ಕೌನ್ಸಿಲಿಂಗ್ ಹಾಗೂ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ/ ಧಾರವಾಡ, ನವೆಂಬರ್ 22: ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಇಂದು ಬೆಳಗ್ಗೆ ಅನೇಕ ಏರಿಯಾ, ಅನೇಕರ ಮನೆಗಳಿಗೆ ಹೋಗಿ,ಯಾರೆಲ್ಲಾ ಗಾಂಜಾ ಸೇರಿದಂತೆ ಅನೇಕ ರೀತಿಯ ಡ್ರಗ್ಸ್ ಸೇವನೆ ಮಾಡುವ ಅನುಮಾನಗಳು ಇತ್ತೋ ಅವರನ್ನೆಲ್ಲಾ ಹುಬ್ಬಳ್ಳಿ ಕಿಮ್ಸ್ ಗೆ ಕರೆದುಕೊಂಡು ಬಂದು ಅವರ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಈ ಪೈಕಿ ಬಹುತೇಕ ಹದಿಹರೆಯದವರು, ಮಧ್ಯವಯಸ್ಕರೇ ಹೆಚ್ಚಿದ್ದರು ಎಂದು ತಿಳಿದು ಬಂದಿದೆ.
ಕಳೆದ ರಾತ್ರಿಯೆಲ್ಲಾ ಕಾರ್ಯಾಚಾರಣೆ ನಡೆಸಿದ್ದ ಪೊಲೀಸರು ಸೂರ್ಯ ಹುಟ್ಟುವ ಮುನ್ನವೇ ಊರಿನ ಮನೆಗಳಿಗೆ ಹೋಗಿ ಅನುಮಾನ ಬಂದವರನ್ನು ಕರೆತಂದಿದ್ದರು. ಬರೋಬ್ಬರಿ ಮುನ್ನೂರಕ್ಕೂ ಹೆಚ್ಚು ಜನರಿಗೆ ಟೆಸ್ಟ್ ಮಾಡಿಸಲಾಗಿದ್ದು, ನೂರಕ್ಕೂ ಹೆಚ್ಚು ಜನರ ಟೆಸ್ಟ್ ವರದಿಗಳು ಪಾಜಿಟಿವ್ ಬಂದಿವೆ. ಇನ್ನೂ ಕೆಲವರ ಮೆಡಿಕಲ್ ವರದಿಗಳು ಬರಬೇಕಿದೆ. ಯಾರೆಲ್ಲರು ಡ್ರಗ್ಸ್ ಸೇವನೆ ಮಾಡುತ್ತಾರೆಂಬುದು ಗೊತ್ತಾಗುತ್ತಿದ್ದಂತೆ, ಅವರ ಪಾಲಕರನ್ನು ಕರೆದು ಮಕ್ಕಳ ಬಗ್ಗೆ ಮಾಹಿತಿ ನೀಡಿ ಅವರ ಜೊತೆ ಕೌನ್ಸಲಿಂಗ್ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಡ್ರಗ್ಸ್ ಸೇವನೆ ಬಿಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
