ರಾತ್ರೋರಾತ್ರಿ ವಿಶಾಲ ಕೆರೆಯಲ್ಲಿ ನೂರಾರು ಮರಗಳ ಮಾರಣಹೋಮ.. ಕಣ್ಮುಚ್ಚಿ ಕುಳಿತ ಅಧಿಕಾರಿಗಳ ಧೋರಣೆ ಏನು?
ಆನೇಕಲ್ ತಾಲ್ಲೂಕಿನ ಕರ್ಪೂರು ಗ್ರಾಮದ 80 ಎಕರೆ ಕೆರೆಯಲ್ಲಿ ಕಾನೂನುಬಾಹಿರವಾಗಿ ಮಣ್ಣನ್ನು ತೆಗೆಯುತ್ತಿರುವುದಲ್ಲದೆ, ಅಲ್ಲಿರುವ ನೂರಾರು ಮರಗಳನ್ನ ಕಡಿದು ಬೆಂಕಿ ಹಚ್ಚಿ ಪರಿಸರವನ್ನ ನಾಶ ಮಾಡಲಾಗುತ್ತಿದೆ. ನಿಯಮಾನುಸಾರ 3 ಅಡಿ ಮಣ್ಣು ತೆಗೆಯಬಹುದು ಅಷ್ಟೇ, ಆದರೆ ಹತ್ತಾರು ಅಡಿ ಆಳ ಮಾಡಿ ಮಣ್ಣನ್ನ ಹೊರತೆಗೆಯಲಾಗುತ್ತಿದೆ.
ಕೆರೆಯಲ್ಲಿ ಹತ್ತಾರು ಅಡಿಗಳಷ್ಟು ಮಣ್ಣನ್ನ ಕಾನೂನುಬಾಹಿರವಾಗಿ ತೆಗೆದು ಸಾಗಾಟ ಮಾಡುವ ಪರಿಪಾಠ, ಇನ್ನೊಂದೆಡೆ ಕೆರೆಯಲ್ಲಿ ನೂರಾರು ಮರಗಳ ಮಾರಣಹೋಮ. ಈ ವಿದ್ಯಮಾನಗಳು ಕಂಡು ಬಂದಿರುವುದು ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಕರ್ಪೂರು ಗ್ರಾಮದ ಕೆರೆಯಲ್ಲಿ. ಹೌದು ಕರ್ಪೂರು ಗ್ರಾಮದ ( Karpur, Anekal ) ಕೆರೆಯು 80 ಎಕರೆ ವಿಸ್ತೀರ್ಣವಿದ್ದು, ಸಾವಿರಾರು ಮರಗಳಿವೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗಿಂದ (small irrigation department officials) ಕೆರೆಯಲ್ಲಿ ಹೂಳು ತೆಗೆಯಲು SCC infrastructure private limited ಎಂಬ ಸಂಸ್ಥೆ ಅನುಮತಿಯನ್ನ ಪಡೆದಿದೆ. ಆದ್ರೆ ಇತ್ತೀಚೆಗೆ ಗ್ರಾಮದ ಸಮೀಪದ ಹೆದ್ದಾರಿ ಕಾಮಗಾರಿ ಹಾಗೂ ರೈಲ್ವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ಬೇಕಾದ ಮಣ್ಣನ್ನ ಕೆರೆಯಿಂದಲೇ ತೆಗೆದು ಸಾಗಾಟ ಮಾಡಲಾಗುತ್ತಿದೆ. ಕೆರೆಯಲ್ಲಿ ನಿಯಮಾನುಸಾರ 3 ಅಡಿ ಮಣ್ಣು ತೆಗೆಯಬಹುದು ಅಷ್ಟೇ, ಆದರೆ ಹತ್ತಾರು ಅಡಿಗಳಷ್ಟು ಮಣ್ಣನ್ನು ಕಾನೂನು ಬಾಹಿರವಾಗಿ ತೆಗೆದು ಕೆರೆಯ ಸ್ವರೂಪವನ್ನೇ ಹಾಳು ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಕೆರೆಯಲ್ಲಿ ಮಣ್ಣನ್ನು ಕಾನೂನು ಬಾಹಿರವಾಗಿ ತೆಗೆಯುತ್ತಿರುವುದಲ್ಲದೆ, ಅಲ್ಲಿದ್ದ ನೂರಾರು ಮರಗಳನ್ನ ಕಡಿದು ಬೆಂಕಿ ಹಚ್ಚಿ ಪರಿಸರವನ್ನ ನಾಶ ಮಾಡಲಾಗುತ್ತಿದೆ. ಕೆರೆಯಲ್ಲಿ ಹತ್ತಾರು ಅಡಿಗಳಷ್ಟು ಆಳ ಮಾಡಿ ಮಣ್ಣನ್ನ ಹೊರತೆಗೆದು ಪ್ರತಿದಿನ ಲಾರಿಗಳ ಮೂಲಕ ನೂರಾರು ಲೋಡ್ ಗಳು ಸಾಗಾಟ ಮಾಡಲಾಗಿದೆ. ಈ ಬಗ್ಗೆ ಕರ್ಪೂರು ಗ್ರಾಮ ಪಂಚಾಯಿತಿಯ ಗಮನಕ್ಕೂ ಸಹ ಬಂದಿದ್ದು, ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮು ಗೌಡ ತಿಳಿಸಿದ್ದಾರೆ.
ಒಟ್ಟಿನಲ್ಲಿ ಅಳಿವಿನಂಚಿಗೆ ತಲುಪುತ್ತಿರುವ ಕೆರೆಗಳನ್ನ ಕಾಪಾಡಿಕೊಳ್ಳಬೇಕಾದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕರ್ಪೂರು ಗ್ರಾಮದ ಕೆರೆಯ ಒಡಲು ಬರಿದಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿರೋದು ವಿಪರ್ಯಾಸ ಸಂಗತಿ. ಇನ್ನಾದ್ರು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಎನ್ನುವುದನ್ನ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ