ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆ ಯಾವುದೇ ಸ್ಥಾನಮಾನದ ಆಸೆಯಿಲ್ಲ: ಬಿಅರ್ ಪಾಟೀಲ್, ಶಾಸಕ

ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆ ಯಾವುದೇ ಸ್ಥಾನಮಾನದ ಆಸೆಯಿಲ್ಲ: ಬಿಅರ್ ಪಾಟೀಲ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 01, 2024 | 1:48 PM

ರಾಜಕೀಯ ನಾಯಕರು ಯಾವುದೇ ಪಕ್ಷದವರಾಗಿರಲಿ, ಅಧಿಕಾರ ಸಿಗದಿದ್ದರೆ ಗೊಣಗಾಡುತ್ತಾರೆ, ಅಸಮಾಧಾನಗೊಳ್ಳುತ್ತಾರೆ ಮತ್ತು ಕೆಲವರು ಪಕ್ಷ ತೊರೆಯುವ ಬೆದರಿಕೆಯನ್ನೂ ಹಾಕುತ್ತಾರೆ. ಒಮ್ಮೆ ಅಧಿಕಾರ ಸಿಕ್ಕಿತು ಅಂತಾದರೆ, ಅಧಿಕಾರದ ಆಸೆಗಾಗಿ ರಾಜಕಾರಣಕ್ಕೆ ಬಂದಿಲ್ಲ, ಜನರ ಸೇವೆ, ರಾಷ್ಟ್ರದ ಸೇವೆ ಮಾಡಲು ಈ ಕ್ಷೇತ್ರ ಆರಿಸಿಕೊಂಡಿದ್ದಾಗಿ ಪೋಸು ಬಿಗಿಯುತ್ತಾರೆ. ಪಾಟೀಲ್ ಬೇರೆ ಗ್ರಹದವರೇನೂ ಅಲ್ಲವಲ್ಲ?

ಬೆಂಗಳೂರು: ಆಳಂದ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿಅರ್ ಪಾಟೀಲ್ (BR Patil) ಖುಷಿಯಿಂದ ಬೀಗುತ್ತಿದ್ದಾರೆ. ನಿಮಗೆ ಗೊತ್ತಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪಾಟೀಲ್ ಒಂದಿಲ್ಲೊಂದು ರಗಳೆ ಮಾಡುತ್ತಾ ಸುದ್ದಿಯಲ್ಲಿದ್ದಾರೆ. ಎಲ್ಲರಂತೆ ಅವರಿಗೂ ಮಂತ್ರಿಯಾಗುವ ಆಸೆ ಇತ್ತು, ಆದರೆ ಸಿಗಲಿಲ್ಲ. ಪ್ರಾಯಶ: ಅದೇ ಕಾರಣಕ್ಕೆ ಅವರು ಅಸಮಾಧಾನಗೊಂಡಿದ್ದರು ಅನಿಸುತ್ತೆ. ಈಗ ಅದು ಶಮನವಾಗಿದೆ. ಪಾಟೀಲರನ್ನು ಮುಖ್ಯಮಂತ್ರಿಯವರ ಸಲಹೆಗಾರನಾಗಿ (adviser to CM) ನೇಮಕ ಮಾಡಲಾಗಿದೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪಾಟೀಲ್, ಹೊಸ ವರ್ಷ ಆರಂಭಗೊಂಡಿರುವ ಪ್ರಯುಕ್ತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಕಂಡು ಶುಭ ಹಾರೈಸಲು ಬಂದಿರುವುದಾಗಿ ಹೇಳಿದರು. ಅದು ಸರಿ, ಮುಖ್ಯಮಂತ್ರಿಯವರ ಸಲಹೆಗಾರ ಮಾಡಿರುವ ಹಿನ್ನೆಲೆಯಲ್ಲಿ ನಿಮ್ಮ ಕೋಪ ಆರಿದೆಯೇ, ಅಸಮಾಧಾನ ಈಗ ಇಲ್ಲವೇ ಅಂತ ಮಾಧ್ಯಮ ಪ್ರತಿನಿಧಿಗಳು ಕೇಳಿದರೆ ಅವರು, ಯಾವುದೇ ಸ್ಥಾನಮಾನದ ಆಸೆ ತನಗಿಲ್ಲ, ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿರಲು ಬಯಸುತ್ತೇನೆ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ