ಪತಿ ಕೆತ್ತಿರುವ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ಆಯ್ಕೆಯಾಗಿರೋದು ಜನ್ಮ ಸಾರ್ಥಕವಾದ ಭಾವ ಮೂಡಿಸಿದೆ: ವಿಜೇತಾ ಅರುಣ್
ಜನೆವರಿ 22 ರಂದು ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಪ್ರಾಣ ಪ್ರತಿಷ್ಠೆಗೊಳ್ಳಲಿರುವ ರಾಮಮಂದಿರದಲ್ಲಿ 5-ವರ್ಷ ಪ್ರಾಯದ ರಾಮಲಲ್ಲಾ ವಿಗ್ರಹ ಕೆತ್ತುವ ಮಹತ್ತರ ಜವಾಬ್ದಾರಿಯನ್ನು ಅರುಣ್ ಯೋಗಿರಾಜ್ ಮತ್ತು ರಾಜಸ್ತಾನದ ಇಬ್ಬರು ಶಿಲ್ಪಿಗಳಿಗೆ ವಹಿಸಲಾಗಿತ್ತು. ಆದರೆ ಅಂತಿಮವಾಗಿ ಆಯ್ಕೆ ಆಗಿರೋದು ನಮ್ಮ ಹೆಮ್ಮೆಯ ಕನ್ನಡಿಗ ಕೆತ್ತಿರುವ ವಿಗ್ರಹ!
ಮೈಸೂರು: ಇದು ಒಬ್ಬ ಅಪ್ರತಿಮ ಕನ್ನಡಿಗನ ವಿಶಿಷ್ಟ ಸಾಧನೆ ಮತ್ತು ಹಿರಿಮೆ. ಮೈಸೂರು ನಗರದವರಾಗಿರುವ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತಿರುವ ಬಾಲರಾಮನ (ರಾಮಲಲ್ಲಾ) (Ram Lalla) ವಿಗ್ರಹ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದಲ್ಲಿ (Ram Mandir) ಪ್ರತಿಷ್ಠಾಪಿಸಲು ಆಯ್ಕೆಯಾಗಿದೆ. ಅರುಣ್ ಯೋಗಿರಾಜ್ ಅವರ ಅಪಾರ ಪ್ರತಿಭೆಗೆ ಸಿಕ್ಕಿರುವ ಮನ್ನಣೆ, ಪುರಸ್ಕಾರ ಸ್ವಾಭಾವಿಕವಾಗೇ ಕುಟುಂಬದ ಸದಸ್ಯರನ್ನು ರೋಮಾಂಚನಗೊಳಿಸಿ ಭಾವಪರವಶರನ್ನಾಗಿ ಮಾಡಿದೆ. ಟಿವಿ9 ಕನ್ನಡ ವಾಹಿನಿಯ ಮೈಸೂರು ವರದಿಗಾರ, ಅರುಣ್ ಯೋಗಿರಾಜ್ ಅವರ ಪತ್ನಿಯೊಂದಿಗೆ ಮಾತಾಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಿಜೇತಾ ಯೋಗಿರಾಜ್ ಎಷ್ಟು ಸಂತೋಷದಲ್ಲಿದ್ದಾರೆಂದರೆ ಅವರ ಬಾಯಿಂದ ಮಾತು ಹೊರಡುತ್ತಿಲ್ಲ. ಸಂತಸ-ಹೆಮ್ಮೆ-ರೋಮಾಂಚನ ಅವರನ್ನು ಭಾವುಕರನ್ನಾಗಿಸಿದೆ. ಕಳೆದ 6 ತಿಂಗಳಿಂದ ಯೋಗಿರಾಜ್ ಅಯೋಧ್ಯೆಯಲ್ಲೇ ಇದ್ದಾರೆ. ತನ್ನ ಪತಿ ಅಪಾರ ಪ್ರತಿಭಾವಂತ ಮತ್ತು ಅದ್ವಿತೀಯ ಶ್ರಮಜೀವಿ ಎಂದು ವಿಜೇತಾ ಹೇಳುತ್ತಾರೆ. ಶಿಲ್ಪಕಲೆ ತಮ್ಮ ಪತಿಯಲ್ಲಿ ಅನುವಂಶೀಯ ಅಂಶವಾಗಿದೆ, ಅವರ ತಾತ ಬಸವಣ್ಣ ಮತ್ತು ತಂದೆ ಯೋಗಿರಾಜ್ ಅತ್ಯುತ್ತಮ ಶಿಲ್ಪಿಗಳಾಗಿದ್ದರು ಎಂದ ಹೇಳುವ ಅವರು ಅರುಣ್ ಕಟೆದಿರುವ ರಾಮಲಲ್ಲಾನ ವಿಗ್ರಹ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ಸುದ್ದಿ ಕೇಳಿ ಜನ್ಮ ಸಾರ್ಥಕವಾದ ಅನುಭವ ಆಗುತ್ತಿದೆ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ