ನಾನು ಹಳ್ಳಿಯವನು, ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆ ಶಿವಕುಮಾರ್ ಟಾಂಗ್

Updated on: Dec 16, 2025 | 12:29 PM

ಡಿಕೆ ಶಿವಕುಮಾರ್ ಅವರು ಮೋಹನ್ ದಾಸ್ ಪೈ ಅವರ ‘ಮಂತ್ರಿ ಹೊರತು ಮಾಸ್ಟರ್ ಅಲ್ಲ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ತಾವು ಹಳ್ಳಿಯವರಾಗಿದ್ದು, ನಮ್ರತೆ ಕಲಿಯುವುದಾಗಿ ತಿಳಿಸಿದ್ದಾರೆ. ಬ್ಲಾಕ್‌ಮೇಲ್‌ಗೆ ಮಣಿಯುವುದಿಲ್ಲ, ಜನರಿಗಾಗಿ ಕೆಲಸ ಮಾಡುತ್ತೇನೆ ಎಂದು ಡಿಕೆಶಿ ಹೇಳಿದ್ದು, ಕಾರ್ಯಕರ್ತರ ನಿಷ್ಠೆಯನ್ನು ಶ್ಲಾಘಿಸಿದರು.

ಬೆಂಗಳೂರು, ಡಿಸೆಂಬರ್ 16: ನಾನು ಹಳ್ಳಿಯವನು, ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆ ಮೂಲಕ ಉದ್ಯಮಿ ಮೋಹನ್ ದಾಸ್ ಪೈಗೆ ಟಾಂಗ್ ಕೊಟ್ಟಿದ್ದಾರೆ. ಬೆಂಗಳೂರಿನ ಅಪಾರ್ಟ್​​ಮೆಂಟ್ ಫೆಡರೇಷನ್​ನ ಕಿರಣ್ ಹೆಬ್ಬಾರ್​ಗೆ ಡಿಕೆ ಶಿವಕುಮಾರ್ ಇತ್ತೀಚೆಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಮಾತನಾಡಿದ್ದರು. ಅವರ ಮಾತಿನ ರೀತಿಗೆ ಮೋಹನ್ ದಾಸ್ ಪೈ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಾನು ಹಳ್ಳಿಯವನು, ಮುಂದೆ ನಮ್ರತೆ ಕಲಿತುಕೊಳ್ಳುತ್ತೇನೆ ಬಿಡಿ ಎಂದರು.

ಏನು ಹೇಳಿದ್ದರು ಡಿಕೆ ಶಿವಕುಮಾರ್?

ಡಿಸೆಂಬರ್ 13ರಂದು ವಿಧಾನಸೌಧದಲ್ಲಿ ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳ ಜೊತೆ ಡಿಕೆ ಶಿವಕುಮಾರ್ ಸಂವಾದ ನಡೆಸಿದ್ದರು. ಇದೇ ವೇಳೆ, ಅಪಾರ್ಟ್​​ಮೆಂಟ್ ಫೆಡರೇಷನ್​ನ ಕಿರಣ್ ಹೆಬ್ಬಾರ್ ಪತ್ರವನ್ನು ಉಲ್ಲೇಖಿಸಿ ಮಾತನಾಡಿದ್ದ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ನಾನು ಪ್ರಧಾನಿಗೇ ಹೆದರದೆ ತಿಹಾರ್ ಜೈಲಿಗೆ ಹೋಗಿ ಬಂದವನು. ಇಂಥ ಬ್ಲಾಕ್‌ಮೇಲ್ ತಂತ್ರಕ್ಕೆಲ್ಲ ಬೆದರಲ್ಲ ಎಂದು ಹೇಳಿದ್ದರು. ಡಿಕೆ ಶಿವಕುಮಾರ್ ಅವರ ಈ ಆಕ್ರೋಶದ ನುಡಿಗಳಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಏನು ಹೇಳಿದ್ದರು ಮೋಹನ್ ದಾಸ್ ಪೈ?

ಉದ್ಯಮಿ ಮೋಹನ್ ದಾಸ್ ಪೈ ಅವರಂತೂ, ಇದು ಉಪಮುಖ್ಯಮಂತ್ರಿಗಳು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಕೊಟ್ಟ ಉತ್ತರವಾ ಅಥವಾ ಬೆದರಿಕೆಯೇ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಅಪಾರ್ಟ್​ಮೆಂಟ್​​ ನಿವಾಸಿಗಳೊಂದಿಗೆ ಸಂವಾದ ವೇಳೆ ಡಿಕೆ ಶಿವಕುಮಾರ್​​ ಗರಂ! ಡಿಸಿಎಂ ಮಾತಿಗೆ ಅಸಮಾಧಾನ

ಪ್ರತಿಪಕ್ಷ ನಾಯಕ ಆರ್ ಅಶೋಕ ಕೂಡ ಉಪ ಮುಖ್ಯಮಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರಿಸಿದ್ದಾರೆ. ನಮ್ರತೆ ಕಲಿತುಕೊಳ್ಳೋಣ ಬಿಡಿ ಎಂದು ಉತ್ತರಿಸಿದ್ದಾರೆ. ಆ ಮೂಲಕ ಮೋಹನ್ ದಾಸ್ ಪೈ ಮತ್ತು ಇತರ ಟಿ ಕಾಕಾರರಿಗೆ ಟಾಂಗ್ ಕೊಟ್ಟಿದ್ದಾರೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 16, 2025 11:10 AM