ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ರೂಪಾ ಮೌದ್ಗೀಲ್ ಸಾಬೀತು ಮಾಡಲಿ: ಬಿ ರಾಘವೇಂದ್ರ ಶೆಟ್ಟಿ, ಕರಕುಶಲ ನಿಗಮ ಅಧ್ಯಕ್ಷ
ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಶೆಟ್ಟಿ ಅವರು, ರೂಪಾ ತಮ್ಮ ವಿರುದ್ಧ ಮಾಡಿರುವ ಅರೋಪಗಳನ್ನು ಸಾಬೀತು ಮಾಡುವಂತೆ ಸವಾಲೆಸೆದರು. 5 ಕೋಟಿ ರೂ. ಗಳ ಅಕ್ರಮದ ಬಗ್ಗೆ ವಿಡಿಯೋ ಕ್ಲಿಪ್ ಇದೆ ಎಂದು ಅವರು ಹೇಳಿದ್ದಾರೆ, ಅದನ್ನವರು ಕೂಡಲೇ ಬಿಡುಗಡೆ ಮಾಡಲಿ ಎಂದು ಶೆಟ್ಟಿ ಹೇಳಿದರು.
Bengaluru: ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರ ನಡೆಸುವವರು ಅಥವಾ ಆ ಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆಯುವುದು ಹೊಸತೇನಲ್ಲ. ಕರಕುಶಲ ಅಭಿವೃದ್ಧಿ ನಿಗಮದ (KSHDC) ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ (Beluru Raghavendra Shetty) ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರಾಗಿರುವ ಐಪಿಎಸ್ ಅಧಿಕಾರಿ ರೂಪಾ ಮೌದ್ಗೀಲ್ (Roopa Moudgil) ನಡುವಿನ ಕದನ ತಾರಕಕ್ಕೇರಿದೆ. ಕೆಲವೇ ದಿನಗಳ ಹಿಂದೆ ರೂಪಾ ಅವರು ನಿಗಮದ ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ರಾಘವೇಂದ್ರ ಶೆಟ್ಟಿ ಉದ್ದೇಶಪೂರ್ವಕವಾಗಿ ಹಾಳು ಮಾಡಿರುವರೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದರು. ಅದಲ್ಲದೆ ಇನ್ನೂ ಬೇರೆ ದೂರುಗಳನ್ನು ಸಹ ರೂಪಾ ಅವರು ಶೆಟ್ಟಿ ವಿರುದ್ಧ ಮಾಡಿದ್ದಾರೆ.
ಅದಕ್ಕೆ ಪ್ರತಿಯಾಗಿ ಗುರುವಾರ ಬೆಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಶೆಟ್ಟಿ ಅವರು, ರೂಪಾ ತಮ್ಮ ವಿರುದ್ಧ ಮಾಡಿರುವ ಅರೋಪಗಳನ್ನು ಸಾಬೀತು ಮಾಡುವಂತೆ ಸವಾಲೆಸೆದರು. 5 ಕೋಟಿ ರೂ. ಗಳ ಅಕ್ರಮದ ಬಗ್ಗೆ ವಿಡಿಯೋ ಕ್ಲಿಪ್ ಇದೆ ಎಂದು ಅವರು ಹೇಳಿದ್ದಾರೆ, ಅದನ್ನವರು ಕೂಡಲೇ ಬಿಡುಗಡೆ ಮಾಡಲಿ ಎಂದು ಶೆಟ್ಟಿ ಹೇಳಿದರು. ಇದೇ ಸಂಗತಿಯನ್ನು ತಾವು ಮುಖ್ಯ ಕಾರ್ಯದರ್ಶಿಗಳಿಗೂ ತಿಳಿಸುವುದಾಗಿ ಅವರು ಹೇಳಿದರು.
ಹಿಂದೆ ತಮ್ಮ ಕಾರು ಅಪಘಾತಕ್ಕೊಳಗಾದಾಗ ರೂಪಾ ಅವರ ಬೇಜವ್ದಾರಿಯಿಂದಾಗಿ ನಿಗಮಕ್ಕೆ 10.71 ಲಕ್ಷ ರೂ. ಗಳ ಹೊಣೆ ಬಿತ್ತು. ಕಾರನ್ನು ಕೂಡಲೇ ರಿಪೇರಿಗೆ ಕಳಿಸಿದ್ದರೆ ವಿಮೆ ಕ್ಲೇಮ್ ಮಾಡಬಹುದಿತ್ತು. ಅಪಘಾತ ನಡೆದ 15 ದಿನಗಳೊಳಗೆ ಕ್ಲೇಮ್ ಅರ್ಜಿ ಸಲ್ಲಿಸಬೇಕೆಂದು ವಿಮಾ ಕಂಪನಿಗಳು ಹೇಳುತ್ತವೆ. ಆದರೆ ರೂಪಾ ಅವರು ಕಾರನ್ನು 9 ತಿಂಗಳವರೆಗೆ ಕೊಳೆಯುವಂತೆ ಮಾಡಿದ್ದರಿಂದ ರಿಪೇರಿಯ ಹಣವನ್ನು ನಿಗಮ ಭರಿಸಬೇಕಾಯಿತು ಎಂದು ಶೆಟ್ಟಿ ಹೇಳಿದರು. ಈ ಬಗ್ಗೆ ತಾವು ರೂಪಾ ಅವರಿಗೆ 76 ನೋಟೀಸಗಳನ್ನು ನೀಡಿರುವುದಾಗಿಯೂ ಅವರು ಹೇಳಿದರು.
ರೂಪಾ ಅವರು 24 ಕೋಟಿ ರೂ. ಗಳ ದುರ್ವ್ಯವಹಾರದ ಬಗ್ಗೆಯೂ ದೂರು ಸಲ್ಲಿಸಿದ್ದಾರೆ. ಆದರೆ ಅದು ನಡೆದಿದ್ದು ಆರ್ ಪಿ ಎಸ್ ಶರ್ಮಾ ಅವರ ಅಧಿಕಾರಾವಧಿಯಲ್ಲಿ. ತಾನು ಅಧಿಕಾರವಹಿಸಿಕೊಂಡ ಕೇವಲ 4 ದಿನಗಳ ನಂತರ ಪ್ರಕರಣ ತನಿಖೆ ನಡೆಸಬೇಕೆಂದು ಬರೆದಿರುವ ಪತ್ರ ತಮ್ಮಲಿದೆ, ಅದರ ಪ್ರತಿಯನ್ನು ಮಾಧ್ಯಮದವರಿಗೆ ನೀಡುವುದಾಗಿ ಶೆಟ್ಟಿ ಹೇಳಿದರು.
ನಿಗಮದ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ದುಡಿದು, ಕರಕುಶಲಕರ್ಮಿಗಳ ಬದುಕನ್ನು ಹಸನಾಗಿಸುವ ಮತ್ತು ಸರ್ಕಾರಕ್ಕೆ ಕೀರ್ತಿ ತರುವ ಹಾಗೆ ಕೆಲಸ ಮಾಡುವ ಆಸೆ ತಮಗಿದೆ ಎಂದು ರಾಘವೇಂದ್ರ ಶೆಟ್ಟಿ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.