ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡುವ ಪಾಶವೀ ಮನಸ್ಥಿತಿಯ ಕಂಡಕ್ಟರ್ಗಳೂ ಇದ್ದಾರೆ!
ಸಿರಾಜುನ್ನೀಸಾ ಹೇಳುವ ಹಾಗೆ, ಕಂಡಕ್ಟರ್ ಬೂಟುಗಾಲಲ್ಲಿ ಅವರ ಹೊಟ್ಟೆಗೆ ಒದ್ದಿದ್ದಾನೆ. ಅಷ್ಟರಲ್ಲಿ ಬಸ್ ಸ್ಟಾರ್ಟ್ ಆಗಿ ಮುಂದೆ ಹೋಗಲಾರಂಭಿಸಿದಾಗ ಪೆಟ್ಟು ತಿಂದ ಅಪಮಾನದಿಂದ ಕುದಿಯುತ್ತಿದ್ದ ಸಿರಾಜುನ್ನೀಸಾ ಅದರ ಹಿಂದೆ ಓಡಿದ್ದಾರೆ. ಆಗ ಪುನಃ ಅವನು ಅದೇ ಬೂಟುಗಾಲಿಂದ ಅವರ ಮುಖಕ್ಕೆ ಒದ್ದಿದ್ದಾನೆ.
Bengaluru: ಸಾರಿಗೆ ಸಚಿವರೇ ಬಿ ಶ್ರೀರಾಮುಲು (B Sriramulu) ಅವರೇ ಈ ಮಹಿಳೆಯ ಅನುಭವಿಸಿದ ನೋವು, ಅವಮಾನ ಮತ್ತು, ಅವರ ಮೇಲೆ ಆಗಿರುವ ಹಲ್ಲೆ ಬಗ್ಗೆ ಫಸ್ಟ್ ಪರ್ಸನ್ ಅಕೌಂಟ್ ಕೇಳಿಸಿಕೊಂಡ್ರಾ? ನಿಮ್ಮ ಅಧೀನ ಮತ್ತು ಸುಪರ್ದಿಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಸಂಸ್ಥೆಯ ಒಬ್ಬ ರಾಕ್ಷಸೀ ಪ್ರವೃತ್ತಿಯ ಕಂಡಕ್ಟರ್ ಮಹಿಳೆಯ ಮೇಲೆ ಹೀಗೆ ಹಲ್ಲೆ ಮಾಡಿದ್ದಾನೆ. ಘಟನೆ ನಡೆದಿರೋದು ಬೆಂಗಳೂರಿನ ಟಿ ದಾಸರಹಳ್ಳಿ ಬಳಿ. ಮಂಗಳವಾರ ಬೆಳಗಿನ ಸಮಯದಲ್ಲಿ ನಡೆದ ಹಲ್ಲೆಯನ್ನು ಮಹಿಳೆ ಮಾಧ್ಯಮಗಳಿಗೆ ವಿವರಿಸುತ್ತಿದ್ದಾರೆ, ದಯವಿಟ್ಟು ಕೇಳಿಸಿಕೊಳ್ಳಿ ಸಚಿವರೇ. ಕಳೆದ ರಾತ್ರಿ ಸಿರಾಜುನ್ನೀಸಾ (Sirajunnisa) ಹೆಸರಿನ ಮಹಿಳೆ ಚಿಕ್ಕಮಗಳೂರಿನ ಕೊಪ್ಪದಿಂದ ಬೆಂಗಳೂರಿಗೆ ರಾಜಹಂಸ ಸ್ಲೀಪರ್ ಕೋಚ್ನಲ್ಲಿ ರೂ. 1340 ಹಣ ತೆತ್ತು ತಮ್ಮ ಇಬ್ಬರು ಮಕ್ಕಳು-ಒಂದೂವರೆ ವರ್ಷದ ಮಗ ಮತ್ತು 12 ವರ್ಷದ ಮಗಳ ಜೊತೆ ಬಂದಿದ್ದಾರೆ. ಅವರು ದಾಸರಹಳ್ಳಿಯಲ್ಲಿ ಇಳಿಯಬೇಕಿತ್ತು. ಅವರ ಚಪ್ಪಲಿ ಸೀಟಿನ ಅಡಿಯಲ್ಲಿ ಹೋಗಿದ್ದರಿಂದ ಅದನ್ನು ತೆಗೆದುಕೊಳ್ಳುವಲ್ಲಿ ಸ್ವಲ್ಪ ಸಮಯವಾಗಿದೆ. ಆಗಲೇ ಕಂಡಕ್ಟರ್-ಅವನ ಹೆಸರು ರವಿಕುಮಾರ (Ravikumar), ಬೈದಾಡಲು ಆರಂಭಿಸಿದ್ದಾನೆ.
ಅಮೇಲೆ ಸಿರಾಜುನ್ನೀಸಾ ಮಕ್ಕಳು ಹಾಗೂ ಲಗ್ಗೇಜ್ ನೊಂದಿಗೆ ಕೆಳಗೆ ಇಳಿದಿದ್ದಾರೆ. ಬಸ್ಸಿನ ಹೊರಭಾಗದ ಲಗ್ಗೇಜ್ ಬಾಕ್ಸ್ ನಲ್ಲಿ ಅವರ ಒಂದು ಸೂಟ್ಕೇಸ್ ಇತ್ತಂತೆ. ಅದನ್ನು ಮಹಿಳೆ ತೆಗೆದುಕೊಳ್ಳುವಾಗ ರವಿಕುಮಾರ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿದ್ದಾನೆ. ಅವನು ಬಳಸಿದ ಪದಗಳನ್ನು ಮಹಿಳೆಯೇ ಹೇಳುತ್ತಿದ್ದಾರೆ ದಯವಿಟ್ಟು ಕೇಳಿಸಿಕೊಳ್ಳಿ ಸಚಿವರೇ. ಸೂಟ್ ಕೇಸ್ ತೆಗೆದುಕೊಂದ ಬಳಿಕ ಸಿರಾಜುನ್ನೀಸಾ ಯಾಕೆ ಬೈದಾಡಿದ್ದು ಅಂತ ಕೇಳಲು ಬಸ್ಸಿನ ಡೋರಲ್ಲಿ ನಿಂತುಕೊಂಡು ಬಯ್ಯುವುದನ್ನು ಮುಂದುವರಿಸಿದ್ದ ರವಿಕುಮಾರನಲ್ಲಿಗೆ ಹೋಗಿದ್ದಾರೆ.
ಸಿರಾಜುನ್ನೀಸಾ ಹೇಳುವ ಹಾಗೆ, ಕಂಡಕ್ಟರ್ ಬೂಟುಗಾಲಲ್ಲಿ ಅವರ ಹೊಟ್ಟೆಗೆ ಒದ್ದಿದ್ದಾನೆ. ಅಷ್ಟರಲ್ಲಿ ಬಸ್ ಸ್ಟಾರ್ಟ್ ಆಗಿ ಮುಂದೆ ಹೋಗಲಾರಂಭಿಸಿದಾಗ ಪೆಟ್ಟು ತಿಂದ ಅಪಮಾನದಿಂದ ಕುದಿಯುತ್ತಿದ್ದ ಸಿರಾಜುನ್ನೀಸಾ ಅದರ ಹಿಂದೆ ಓಡಿದ್ದಾರೆ. ಆಗ ಪುನಃ ಅವನು ಅದೇ ಬೂಟುಗಾಲಿಂದ ಅವರ ಮುಖಕ್ಕೆ ಒದ್ದಿದ್ದಾನೆ. ಮಹಿಳೆಯ ಮುಖದ ಮೇಲಿನ ಗಾಯಗಳನ್ನು ಗಮನಿಸಿ ಸಚಿವರೇ.
ಇಬ್ಬರು ಮಕ್ಕಳನ್ನು ಹಿಡಿದುಕೊಂಡ ಅಸಾಹಯಕ ಮಹಿಳೆಯ ಮೇಲೆ ಅಗುತ್ತಿದ್ದ ಹಲ್ಲೆಯನ್ನು ನೋಡಿ ಅಲ್ಲಿದ್ದ ಆಟೋ ಚಾಲಕರು ಬಸ್ಸನ್ನು ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಸಿರಾಜುನ್ನೀಸಾ ಕೂಡ ಪೊಲೀಸ ಕಂಟ್ರೋಲ್ ರೂಮಿಗೆ ಫೋನ್ ಮಾಡಿದ್ದಾರೆ ಮತ್ತು ಪೊಲೀಸ್ ವ್ಯಾನ್ ಕೂಡಲೇ ಸ್ಥಳಕ್ಕೆ ಧಾವಿಸಿದೆ.
ಬಸ್ಸಲ್ಲಿದ್ದ ಬೇರೆ ಪ್ರಯಾಣಿಕರು ಕಂಡಕ್ಟರ್ ನ ಗೂಂಡಾವರ್ತನೆಯಿಂದ ಭೀತಿಗೊಳಗಾಗಿ ಬಸ್ಸಿಂದ ಕೆಳಗಿಳಿದುಬಿಟ್ಟರು ಎಂದು ಸಿರಾಜುನ್ನೀಸಾ ಹೇಳುತ್ತಾರೆ ಸಚಿವರೇ.
ಈಗ ಈ ಮಹಿಳೆಗೆ ನೀವು ನ್ಯಾಯ ದೊರಕಿಸಬೇಕು ಸಚಿವರೇ. ಕೆ ಎಸ್ ಆರ್ ಟಿ ಸಿ ಬಸ್ಸಿನ ನಿರ್ವಾಹಕರು ಮತ್ತು ಚಾಲಕರು ಹೀಗೆ ಪ್ರಯಾಣಿಕರ ಮೇಲೆ ಗೂಂಡಾಗಿರಿ ನಡೆಸೋದು, ಹಲ್ಲೆ ಮಾಡೋದು ಮೊದಲ ಸಲವೇನಲ್ಲ. ಹಿಂದಿನ ಘಟನೆಗಳಲ್ಲಿ ನಿಮ್ಮ ಇಲಾಖೆ ತಪ್ಪಿತಸ್ಥರನ್ನು ಶಿಕ್ಷಿಸದಿರುವುದು ಅವುಗಳ ಪುನರಾವರ್ತನೆಗೆ ಕಾರಣವಾಗಿದೆ.
ನಿಮ್ಮ ಬಸ್ಸುಗಳಲ್ಲಿ ಜನ ನಿರ್ಭೀತಿಯಿಂದ ಪ್ರಯಾಣಿಸಬೇಕೆಂದರೆ ಅವರಲ್ಲಿ ಆ ವಿಶ್ವಾಸ ಹುಟ್ಟಬೇಕಾದರೆ, ಸಚಿವರೇ ನೀವು ರವಿಕುಮಾರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
ಇದನ್ನೂ ಓದಿ: Trending: ದ್ವಿಚಕ್ರ ವಾಹನದಲ್ಲಿ ಆರು ಮಂದಿಯ ಸಂಚಾರ: ರೂಲ್ಸ್ ಬ್ರೇಕರ್ಸ್ ಯುವಕರ ದುಸ್ಸಾಹಸದ ವಿಡಿಯೋ ವೈರಲ್