ವಿಧಾನ ಪರಿಷತ್ ಚುನಾವಣೆಗೆ ಜೆಡಿ(ಎಸ್) ಪುನಃ ಶರವಣರನ್ನು ಅಭ್ಯರ್ಥಿಯಾಗಿ ಘೋಷಿಸಿದ ಕಾರಣ ಹೆಚ್ ಡಿಕೆ ವಿವರಿಸಿದರು

ವಿಧಾನ ಪರಿಷತ್ ಚುನಾವಣೆಗೆ ಜೆಡಿ(ಎಸ್) ಪುನಃ ಶರವಣರನ್ನು ಅಭ್ಯರ್ಥಿಯಾಗಿ ಘೋಷಿಸಿದ ಕಾರಣ ಹೆಚ್ ಡಿಕೆ ವಿವರಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 24, 2022 | 5:37 PM

ಪಕ್ಷದ ಬಗ್ಗೆ ವಿರೋಧಿಗಳು ಹಗುರವಾಗಿ ಮಾತಾಡಿದಾಗ, ಶರವಣ ಉದ್ವೇಗದಿಂದ ಪ್ರತಿಕ್ರಿಯಿಸದೆ ಬಹಳ ಶಾಂತಚಿತ್ತದಿಂದ ಅಂಥ ಸಂದರ್ಭಗಳನ್ನು ನಿರ್ವಹಿಸಿದ್ದಾರೆ ಮತ್ತು ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಾ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

Bengaluru: ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿ(ಎಸ್) (JD(S)) ಪಕ್ಷ ಮತ್ತೊಮ್ಮೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಟಿ ಎ ಶರವಣ (TA Saravana) ಅವರನ್ನು ಆಯ್ಕೆ ಮಾಡಿದೆ. ಯಾಕೆ ಪುನಃ ಅವರಿಗೆ ಅವಕಾಶ ನೀಡಲಾಗಿದೆ, ಯಾವ ಮಾನದಂಡ ಬಳಸಲಾಗಿದೆ ಅನ್ನೋದನ್ನು ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಮಂಗಳವಾರ ಬೆಂಗಳೂರಲ್ಲಿ ಮಾಧ್ಯಮಗಳಿಗೆ ವಿವರಿಸಿದರು. ಶರವಣ ಅವರು ಪಕ್ಷಕ್ಕಾಗಿ ದುಡಿದಿರುವುದನ್ನು ಅವರು ಮನಸಾರೆ ಕೊಂಡಾಡಿದರು. ಮೊದಲ ಬಾರಿಗೆ ಅಂದರೆ 2014ರಲ್ಲಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಎದುರಾದ ನಕಾರಾತ್ಮಕ ಪ್ರತಿಕ್ರಿಯೆ ಈ ಬಾರಿ ಉಂಟಾಗಿಲ್ಲ. ಯಾಕೆಂದರೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಮೇಲೆ ಶರವಣ ಪಕ್ಷಕ್ಕೆ ಬಹಳ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಪಕ್ಷದ ಸರ್ವತೋಮುಖ ಬೆಳವಣಿಗೆಯಲ್ಲಿ ದೊಡ್ಡ ಕಾಣಿಕೆ ಸಲ್ಲಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಪರಿಷತ್ತಿನ ಸದಸ್ಯರಾಗಿ ಶರವಣ ಅವರು ಸದನದ ಕಲಾಪದಲ್ಲಿ ನಿಯಮಿತವಾಗಿ ಪಾಲ್ಗೊಂಡಿದ್ದಾರೆ ಎಂದ ಕುಮಾರಸ್ವಾಮಿಯವರು, ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತ ತಮ್ಮ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ, ಅವರ ಎಲ್ಲ ಪ್ರಯತ್ನಗಳಲ್ಲಿ ಪ್ರಾಮಾಣಿಕತೆ ಎದ್ದು ಕಾಣುತ್ತದೆ ಅಂತ ಹೇಳಿದರು. ಅವರು ಪ್ರತಿನಿಧಿಸುವ ಸಮಾಜ ಬಹಳ ಚಿಕ್ಕದು, ಅದನ್ನೇ ಮಾನದಂಡವಾಗಿಟ್ಟುಕೊಂಡು ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಅವರು ಹೇಳಿದರು.

ಪಕ್ಷದ ಬಗ್ಗೆ ವಿರೋಧಿಗಳು ಹಗುರವಾಗಿ ಮಾತಾಡಿದಾಗ, ಶರವಣ ಉದ್ವೇಗದಿಂದ ಪ್ರತಿಕ್ರಿಯಿಸದೆ ಬಹಳ ಶಾಂತಚಿತ್ತದಿಂದ ಅಂಥ ಸಂದರ್ಭಗಳನ್ನು ನಿರ್ವಹಿಸಿದ್ದಾರೆ ಮತ್ತು ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಾ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ ಅವರಿಗೆ ಒಂದು ಟಾಸ್ಕನ್ನೂ ಪಕ್ಷ ನೀಡಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅವರು ಬಸವನಗುಡಿ ಮತ್ತು ಚಿಕ್ಕಪೇಟೆ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಅವರು ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ಅವರ ಮೇಲೆ ಹೊರಿಸಲಾಗಿದೆ, ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:   ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರವಾರು ತಾರತಮ್ಯ ಆರೋಪ: ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಸಾಲು ಸಾಲು ಟ್ವೀಟ್