IND vs NZ: ಸೂಪರ್‌ಮ್ಯಾನ್ ಫಿಲಿಪ್ಸ್; 0.78 ಸೆಕೆಂಡುಗಳಲ್ಲಿ ಗಿಲ್ ಆಟ ಅಂತ್ಯ..! ವಿಡಿಯೋ ನೋಡಿ
Champions Trophy 2025: ಈ ಪಂದ್ಯಾವಳಿಗೂ ಮುಂಚೆಯೇ ಗ್ಲೆನ್ ಫಿಲಿಪ್ಸ್ ಕೆಲವು ಅದ್ಭುತ ಕ್ಯಾಚ್‌ಗಳನ್ನು ಹಿಡಿದಿದ್ದರು. ಆದರೆ ಈ ಪಂದ್ಯಾವಳಿಯಲ್ಲಿ ಅವರು ಮೊಹಮ್ಮದ್ ರಿಜ್ವಾನ್ ಮತ್ತು ವಿರಾಟ್ ಕೊಹ್ಲಿ ಅವರ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಈಗ ಫೈನಲ್‌ನಲ್ಲಿ ಅವರು ಮತ್ತೊಮ್ಮೆ ತಮ್ಮ ಫೀಲ್ಡಿಂಗ್ ಕೌಶಲ್ಯವನ್ನು ಪ್ರದರ್ಶಿಸಿ ಶುಭ್ಮನ್ ಗಿಲ್ಗೆ ಪೆವಿಲಿಯನ್ ದಾರಿ ತೋರಿಸಿದರು.
ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 252 ರನ್‌ಗಳ ಗುರಿಗೆ ಉತ್ತರವಾಗಿ, ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆಯಿತು. ತಂಡದ ಪರ ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡಿ ಬೇಗನೆ ಅರ್ಧಶತಕ ಗಳಿಸಿದರು. ಮತ್ತೊಂದೆಡೆ, ಅವರಿಗೆ ಶುಭ್‌ಮನ್ ಗಿಲ್ ಅವರಿಂದ ಉತ್ತಮ ಬೆಂಬಲ ದೊರೆಯುತ್ತಿತ್ತು. ಇವರಿಬ್ಬರ ನಡುವೆ 18 ಓವರ್‌ಗಳಲ್ಲಿ 100 ರನ್‌ಗಳ ಪಾಲುದಾರಿಕೆ ಇತ್ತು. ಹೀಗಾಗಿ ಟೀಂ ಇಂಡಿಯಾ ಸುಲಭವಾಗಿ ಗೆಲುವಿನತ್ತ ಸಾಗುತ್ತಿರುವಂತೆ ತೋರುತ್ತಿತ್ತು. ಇತ್ತ ನ್ಯೂಜಿಲೆಂಡ್ ಕೂಡ ಮೊದಲ ವಿಕೆಟ್‌ಗಾಗಿ ಕಾಯುತ್ತಿತ್ತು. ಇದಕ್ಕೆ ಪೂರಕವಾಗಿ ಕಿವೀಸ್ ತಂಡದ ಸೂಪರ್‌ಮ್ಯಾನ್ ಫಿಲಿಪ್ಸ್ ಮತ್ತೊಂದು ಅದ್ಭುತ ಫ್ಲೈಯಿಂಗ್ ಕ್ಯಾಚ್ ಹಿಡಿಯುವ ಮೂಲಕ ಭಾರತಕ್ಕೆ ಮೊದಲ ಶಾಕ್ ನೀಡಿದರು.
0.78 ಸೆಕೆಂಡುಗಳಲ್ಲಿ ಅದ್ಭುತ ಕ್ಯಾಚ್
ಭಾರತದ ಇನ್ನಿಂಗ್ಸ್ನಲ್ಲಿ 19 ನೇ ಓವರ್ ಅನ್ನು ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಮಾಡುತ್ತಿದ್ದರು. ತಮ್ಮ ಓವರ್‌ನ ನಾಲ್ಕನೇ ಎಸೆತದಲ್ಲಿ, ಗಿಲ್ ಜಾಗ ಮಾಡಿಕೊಂಡು ಎಕ್ಸ್ಟ್ರಾ ಕವರ್ ಮೇಲೆ ಶಾಟ್ ಆಡಲು ಪ್ರಯತ್ನಿಸಿದರು. ಆದರೆ ಅಲ್ಲಿಯೇ ನಿಂತಿದ್ದ ಫಿಲಿಪ್ಸ್ ಗಾಳಿಯಲ್ಲಿ ಎತ್ತರಕ್ಕೆ ಹಾರಿ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದರು. ಫಿಲಿಪ್ಸ್ ಅವರ ಕ್ಯಾಚ್ ನೋಡಿ ಇಡೀ ಕ್ರೀಡಾಂಗಣದಲ್ಲಿ ಮೌನ ಆವರಿಸಿತು. ಇಡೀ ಕಿವಿ ತಂಡ ಫಿಲಿಪ್ಸ್ ಕಡೆಗೆ ಓಡಿ ಬಂದು ಅವರನ್ನು ಅಪ್ಪಿಕೊಂಡಿತು. ಈ ಕ್ಯಾಚ್ ಹಿಡಿಯಲು ಫಿಲಿಪ್ಸ್ ಕೇವಲ 0.78 ಸೆಕೆಂಡುಗಳನ್ನು ತೆಗೆದುಕೊಂಡಿದ್ದು, ಅವರ ಚುರುಕುತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ