ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ವೃತ್ತಿಜೀವನಕ್ಕೆ ಸ್ಮರಣೀಯ ಆರಂಭ ನೀಡಿದ ಗಂಭೀರ್ ಶಿಷ್ಯ
IND vs SA: ನವೆಂಬರ್ 13 ರಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ರಮಣದೀಪ್ ಸಿಂಗ್ ಅವರ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯ ಇದಾಗಿತ್ತು. ಅವರು ತಮ್ಮ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಅದ್ಭುತ ಆರಂಭ ಮಾಡಿದರು. ಈ ಗೆಲುವಿನೊಂದಿಗೆ ಭಾರತ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.
ನವೆಂಬರ್ 13 ಬುಧವಾರದಂದು ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಈ ಮೂಲಕ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಈ ಪಂದ್ಯಕ್ಕೆ ತನ್ನ ಪ್ಲೇಯಿಂಗ್ 11ನಲ್ಲಿ ಒಂದು ಬದಲಾವಣೆ ಮಾಡಿದ್ದ ಟೀಂ ಇಂಡಿಯಾ, ಯುವ ಆಲ್ರೌಂಡರ್ ರಮಣದೀಪ್ ಸಿಂಗ್‌ಗೆ ಅವಕಾಶ ನೀಡಿತ್ತು. ಈ ಮೂಲಕ ರಮಣದೀಪ್, ಇಂಡಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಭಾರತದ 118ನೇ ಆಟಗಾರ ಎನಿಸಿಕೊಂಡರು. ಇದಲ್ಲದೆ ಮೊದಲ ಪಂದ್ಯದಲ್ಲೇ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ರಮಣದೀಪ್ ತಮ್ಮ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸುವಲ್ಲಿ ಯಶಸ್ವಿಯಾದರು.
ಮೊದಲ ಎಸೆತದಲ್ಲೇ ಸಿಕ್ಸರ್
ವಾಸ್ತವವಾಗಿ, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರಮಣದೀಪ್ ಸಿಂಗ್, ತಾವು ಎದುರಿಸಿದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಆರಂಭವನ್ನು ಸ್ಮರಣೀಯವಾಗಿಸಿಕೊಂಡರು. ಇದಲ್ಲದೆ ತಮ್ಮ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ರಮಣದೀಪ್ ಸಿಂಗ್ ಅವರಿಗಿಂತ ಮೊದಲು ಸೂರ್ಯಕುಮಾರ್ ಯಾದವ್ ತಮ್ಮ ಮೊದಲ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದ ಸಾಧನೆ ಮಾಡಿದ್ದರು. ಈ ಪಂದ್ಯದಲ್ಲಿ 6 ಎಸೆತಗಳನ್ನು ಆಡುವ ಅವಕಾಶ ಪಡೆದ ರಮಣದೀಪ್ 15 ರನ್ ಗಳಿಸಿ ರನೌಟ್ ಆದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಸಿಕ್ಸರ್ ಬಾರಿಸಿದ್ದಲ್ಲದೆ, ಬೌಂಡರಿಯನ್ನೂ ಹೊಡೆದರು.
ಪಂದ್ಯಕ್ಕೂ ಮುನ್ನ ರಮಣದೀಪ್ ಸಿಂಗ್ ಅವರಿಗೆ ವಿವಿಎಸ್ ಲಕ್ಷ್ಮಣ್ ಮತ್ತು ಹಾರ್ದಿಕ್ ಪಾಂಡ್ಯ ಚೊಚ್ಚಲ ಕ್ಯಾಪ್ ನೀಡಿದರು. ವಿವಿಎಸ್ ಕ್ಯಾಪ್ ಅನ್ನು ಹಾರ್ದಿಕ್ ಅವರಿಗೆ ಹಸ್ತಾಂತರಿಸಿದರು, ಅವರು ಅದನ್ನು ರಮಣದೀಪ್ ಸಿಂಗ್ ಅವರಿಗೆ ಹಸ್ತಾಂತರಿಸಿದರು. ರಮಣದೀಪ್ ಸಿಂಗ್ ಕೂಡ ಹಾರ್ದಿಕ್ ಪಾಂಡ್ಯ ಅವರಂತೆ ಪೇಸ್ ಆಲ್ ರೌಂಡರ್. ಐಪಿಎಲ್ ಹೊರತುಪಡಿಸಿ, ದೇಶೀಯ ಕ್ರಿಕೆಟ್‌ನಲ್ಲಿ ಅವರು ಬೌಲಿಂಗ್ ಮಾಡುತ್ತಾರೆ. ಆದರೆ ನಾಯಕ ಸೂರ್ಯಕುಮಾರ್ ಯಾದವ್, ಮೊದಲ ಪಂದ್ಯದಲ್ಲಿ ಅವರಿಗೆ ಬೌಲಿಂಗ್ ನೀಡಲಿಲ್ಲ. ವೇಗಿ ಆವೇಶ್ ಖಾನ್ ಬದಲಿಗೆ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಲಾಯಿತ್ತಾದರೂ, ರಮಣದೀಪ್ ಸಿಂಗ್‌ಗೆ ಒಂದೇ ಒಂದು ಓವರ್ ಬೌಲ್ ಮಾಡಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ