ಹಬ್ಬದ ವೇಳೆ ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಕೇಂದ್ರ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ ಜಾರಿ
ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ, ದೇಶಾದ್ಯಂತ ಇರುವ ಸಕ್ಕರೆ ವ್ಯಾಪಾರಿಗಳು ಈ ವರ್ಷದ ನವೆಂಬರ್ 30ರವರೆಗೆ ಗರಿಷ್ಠ 400 ಟನ್ ಸಕ್ಕರೆಯನ್ನು ಮಾತ್ರ ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ. ಇದರೊಂದಿಗೆ, ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಬಲ್ಕ್ ಗ್ರಾಹಕರು (ಉದಾಹರಣೆಗೆ: ಸ್ವೀಟ್ ತಯಾರಕರು, ಪಾನೀಯ ಸಂಸ್ಥೆಗಳು ಇತ್ಯಾದಿ) ತಮ್ಮ 15 ದಿನಗಳ ಬಳಕೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಸಕ್ಕರೆಯನ್ನು ಸ್ಟಾಕ್ ಮಾಡುವಂತಿಲ್ಲ.
ನವದೆಹಲಿ, ಆಗಸ್ಟ್ 22: ಹಬ್ಬದ ಋತುವಿನ ಸಂದರ್ಭದಲ್ಲಿ ಸಕ್ಕರೆ ಬೆಲೆಯಲ್ಲಿ (Sugar Price) ಉಂಟಾಗುತ್ತಿರುವ ಸಾರ್ವಕಾಲಿಕ ಏರಿಕೆಯನ್ನು ತಡೆಯಲು ಮತ್ತು ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕೆಲವು ಸಕ್ಕರೆ ಗಿರಣಿಗಳು ಹಾಗೂ ವರ್ತಕರು ನಡೆಸುತ್ತಿರುವ ಅಕ್ರಮ ದಾಸ್ತಾನು ಮತ್ತು ಕೃತಕ ಅಭಾವವೇ ಇತ್ತೀಚಿನ ಬೆಲೆ ಏರಿಕೆಗೆ ಮುಖ್ಯ ಕಾರಣವೆಂದು ಗುರುತಿಸಿರುವ ಸರ್ಕಾರ, ಸಕ್ಕರೆ ದಾಸ್ತಾನಿನ ಮಿತಿಯನ್ನು 15 ದಿನಗಳಿಗೆ ಕಡಿತಗೊಳಿಸಿ ಆದೇಶಿಸಿದೆ.
ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ, ದೇಶಾದ್ಯಂತ ಇರುವ ಸಕ್ಕರೆ ವ್ಯಾಪಾರಿಗಳು ಈ ವರ್ಷದ ನವೆಂಬರ್ 30ರವರೆಗೆ ಗರಿಷ್ಠ 400 ಟನ್ ಸಕ್ಕರೆಯನ್ನು ಮಾತ್ರ ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ. ಇದರೊಂದಿಗೆ, ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಬಲ್ಕ್ ಗ್ರಾಹಕರು (ಉದಾಹರಣೆಗೆ: ಸ್ವೀಟ್ ತಯಾರಕರು, ಪಾನೀಯ ಸಂಸ್ಥೆಗಳು ಇತ್ಯಾದಿ) ತಮ್ಮ 15 ದಿನಗಳ ಬಳಕೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಸಕ್ಕರೆಯನ್ನು ಸ್ಟಾಕ್ ಮಾಡುವಂತಿಲ್ಲ.
ಮಾರುಕಟ್ಟೆಗೆ ಸಕ್ಕರೆ ಪೂರೈಕೆಯನ್ನು ಹೆಚ್ಚಿಸುವ ಉದ್ದೇಶದಿಂದ, ಅಕ್ಟೋಬರ್ 15ರಿಂದಲೇ ಕಬ್ಬು ನುರಿಯಲು ಕೆಲಸ ಪ್ರಾರಂಭಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಸಕ್ಕರೆ ಗಿರಣಿಗಳಿಗೆ ಸರ್ಕಾರ ಸಲಹೆ ನೀಡಿದೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ 3ರಿಂದ 4 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿತ್ತು. ಆದರೆ ಈ ಬಾರಿ ಬೇಗನೇ ನುರಿಸುವಿಕೆ ಆರಂಭಿಸುವುದರಿಂದ ಉತ್ಪಾದನೆಯು 10 ಲಕ್ಷ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ. ಇದರಿಂದ ಹಬ್ಬದ ಸಾಲಿನಲ್ಲಿ ಸಕ್ಕರೆಯ ಲಭ್ಯತೆ ಹೆಚ್ಚಿ, ಬೆಲೆ ನಿಯಂತ್ರಣಕ್ಕೆ ಬರಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ