ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ: ದೆಹಲಿ-ಚೆನ್ನೈ ವಿಮಾನ ಹೈದರಾಬಾದ್ನಲ್ಲಿ ತುರ್ತು ಲ್ಯಾಂಡಿಂಗ್
ಇಂಡಿಗೋ ದೆಹಲಿ-ಚೆನ್ನೈ ವಿಮಾನದಲ್ಲಿ ಪ್ರಯಾಣಿಕರ ಲಗೇಜ್‌ನಲ್ಲಿದ್ದ ಪವರ್ ಬ್ಯಾಂಕ್ ಸ್ಪೋಟಗೊಂಡ ಪರಿಣಾಮ ವಿಮಾನವನ್ನು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ತಕ್ಷಣವೇ ಬೆಂಕಿಯನ್ನು ನಂದಿಸಿ ದೊಡ್ಡ ದುರಂತ ತಪ್ಪಿಸಲಾಗಿದೆ.
ನವದೆಹಲಿ, ಅಕ್ಟೋಬರ್ 12: ದೆಹಲಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟಗೊಂಡ ಘಟನೆ ನಡೆದಿದೆ. ವಿಮಾನ ಹಾರಾಟದ ವೇಳೆ, ಪ್ರಯಾಣಿಕರ ಲಗೇಜ್‌ನಲ್ಲಿ ಇಟ್ಟಿದ್ದ ಪವರ್ ಬ್ಯಾಂಕ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಈ ಅನಿರೀಕ್ಷಿತ ಘಟನೆಯಿಂದಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದರು.
ತಕ್ಷಣವೇ ವಿಮಾನ ಸಿಬ್ಬಂದಿ ಮತ್ತು ಕೆಲವು ಪ್ರಯಾಣಿಕರು ಸಮಯ ಪ್ರಜ್ಞೆ ಮೆರೆದು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಅವರ ಶೀಘ್ರ ಪ್ರತಿಕ್ರಿಯೆ ಮತ್ತು ಹರಸಾಹಸದಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಸುರಕ್ಷತಾ ದೃಷ್ಟಿಯಿಂದ, ದೆಹಲಿ-ಚೆನ್ನೈ ಮಾರ್ಗದಲ್ಲಿದ್ದ ವಿಮಾನವನ್ನು ಹೈದರಾಬಾದ್‌ನತ್ತ ಡೈವರ್ಟ್ ಮಾಡಲಾಯಿತು.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನ ಸುರಕ್ಷಿತವಾಗಿ ಇಳಿದ ನಂತರ, ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಈ ಘಟನೆಯು ವಿಮಾನಗಳಲ್ಲಿ ಪವರ್ ಬ್ಯಾಂಕ್‌ಗಳ ಸುರಕ್ಷತೆಯ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

